

ವಾಷಿಂಗ್ಟನ್: ಹೆಚ್ಚುವರಿ ಸುಂಕ, ಹೆಚ್1 ಬಿ ವೀಸಾ ವಿಚಾರ ನಡುವೆಯೂ ಪ್ರಧಾನಿ ಮೋದಿಯನ್ನು ಓರ್ವ ಮಹಾನ್ ವ್ಯಕ್ತಿ ಮತ್ತು ಸ್ನೇಹಿತ ಎಂದು ಕರೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಉಭಯ ರಾಷ್ಟ್ರಗಳ ವ್ಯಾಪಾರ ಒಪ್ಪಂದದ ಭಾಗವಾಗಿ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸುಳಿವು ನೀಡಿದ್ದಾರೆ.
ಗುರುವಾರ(ನ. 06) ಶ್ವೇತಭವನದಲ್ಲಿ ತೂಕ ಇಳಿಸುವ ಔಷಧಿಗಳ ಬೆಲೆಗಳನ್ನು ಕಡಿಮೆ ಮಾಡಲು ಹೊಸ ಒಪ್ಪಂದ ಘೋಷಿಸಿದ ಬಳಿಕ ಮಾತನಾಡಿರುವ ಅವರು, ಪ್ರಧಾನಿ ಮೋದಿಯೊಂದಿಗಿನ ತಮ್ಮ ಮಾತುಕತೆಗಳು ಉತ್ತಮವಾಗಿ ನಡೆಯುತ್ತಿವೆ. ರಷ್ಯಾದಿಂದ ಕಚ್ಚಾತೈಲ ಹೆಚ್ಚಾಗಿ ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಅವರು ನನ್ನ ಸ್ನೇಹಿತ, ಭಾರತಕ್ಕೆ ಬರುವಂತೆ ನನಗೆ ಕೇಳಿಕೊಳ್ತಿದ್ದಾರೆ. ಎಲ್ಲಾ ಲೆಕ್ಕಾಚಾರವನ್ನು ಮಾಡುತ್ತೇವೆ. ಅಂತಿಮವಾಗಿ ಹೋಗುತ್ತೇನೆ ಎಂದು ಹೇಳಿದ್ದಾರೆ.
ಮುಂದಿನ ವರ್ಷ ಭಾರತಕ್ಕೆ ಹೋಗುತ್ತಿರಾ? ಎಂದು ಪತ್ರಕರ್ತರು ನೇರವಾಗಿ ಕೇಳಿದಾಗ, ಹೌದು, ಮುಂದಿನ ವರ್ಷ ಹೋಗಬಹುದು ಎಂದು ಉತ್ತರಿಸಿದ್ದಾರೆ.
ಭಾರತದ ಮೇಲೆ ಭಾರಿ ಸುಂಕಗಳನ್ನು ವಿಧಿಸುವ ನಿರ್ಧಾರವನ್ನು ಅನುಸರಿಸಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಗೆ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿಲ್ಲ ಎಂದು ಆಗಸ್ಟ್ ತಿಂಗಳಿನಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಹೇಳಿದ ತಿಂಗಳುಗಳು ನಂತರ ಟ್ರಂಪ್ ಅವರಿಂದ ಈ ಹೇಳಿಕೆ ಬಂದಿದೆ. (ಏಜೆನ್ಸೀಸ್)