

ನ್ಯೂ ಸೌತ್ ವೇಲ್ಸ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರವನ್ನು ಒಳಗೊಂಡ ಒಂದು ಡಾಲರ್ ನಾಣ್ಯದ ಪ್ರಸ್ತಾಪ ಇದೀಗ ಅಮೆರಿಕದ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡತೊಡಗಿದೆ. ಇದು ಪ್ರಾಚೀನ ರೋಮನ್ ನಾಣ್ಯಶಾಸ್ತ್ರ ಜಗತ್ತಿನಲ್ಲಿಯೂ ಚರ್ಚೆಗೆ ನಾಂದಿ ಹಾಡಿದೆ. ಪ್ರಸ್ತಾವಿತ ನಾಣ್ಯದ ಒಂದು ಬದಿಯಲ್ಲಿ ಟ್ರಂಪ್ರ ಪೊ›ಫೈಲ್ ಚಿತ್ರ ಇರುತ್ತದೆ. ಇನ್ನೊಂದು ಬದಿಯಲ್ಲಿ ಟ್ರಂಪ್ ‘ಫೈಟ್, ಫೈಟ್, ಫೈಟ್’ ಎಂಬ ಪದಗಳೊಂದಿಗೆ ಧೈರ್ಯವಾಗಿ ಮುಷ್ಟಿ ಎತ್ತಿಹಿಡಿದಿರುವ ಚಿತ್ರ ಇರುತ್ತದೆ. ಇದು ಸದ್ಯಕ್ಕೆ ಕರಡು ಪ್ರಸ್ತಾಪದ ಹಂತದಲ್ಲಿದೆ. ಅಮೆರಿಕದ ಸ್ವಾತಂತ್ರ್ಯ ಘೊಷಣೆಯ 250 ವರ್ಷಗಳ ಸ್ಮರಣೆಗಾಗಿ 2026ರಲ್ಲಿ ಈ ನಾಣ್ಯವನ್ನು ಹೊರತರುವ ಸಾಧ್ಯತೆ ಇದೆ. ಆದರೆ ಯಾವುದೇ ಜೀವಂತ ವ್ಯಕ್ತಿಯ ಚಿತ್ರವನ್ನು ಅಮೆರಿಕದ ಬಾಂಡ್ಗಳು, ನೋಟು-ನಾಣ್ಯಗಳ ಮೇಲೆ ಮುದ್ರಿಸುವುದನ್ನು ನಿಷೇಧಿಸುವ ಹಳೆಯ ಕಾನೂನು ಅಸ್ತಿತ್ವದಲ್ಲಿದೆ. 2,000 ವರ್ಷಗಳ ಹಿಂದೆ, ರೋಮನ್ ನಾಣ್ಯಗಳ ಮೇಲೆ ಜೀವಂತ ವ್ಯಕ್ತಿಗಳ ಚಿತ್ರ ಹಾಕುವ ಪ್ರಸ್ತಾಪ ಇದೇ ರೀತಿ ವಿವಾದ ಉಂಟುಮಾಡಿತ್ತು ಎಂದು ಇತಿಹಾಸಜ್ಞರು ಹೇಳಿದ್ದಾರೆ.