COVID19 ಮೂಲ ಹುಡುಕಲು ಉನ್ನತ ಮಟ್ಟದ ಅಂತಾರಾಷ್ಟ್ರೀಯ ನಿಯೋಗ ರಚನೆಗೆ ಶುರುವಾಗಿದೆ ಒತ್ತಡ- ತನಿಖೆಯಾಗಬೇಕಾದ ಅಂಶಗಳೇನು?!

White House 17 APR 20
Published on

ವಾಷಿಂಗ್ಟನ್​: ನೋವೆಲ್​ ಕರೊನಾ ವೈರಸ್​ COVID19 ನ ಮೂಲ ಯಾವುದು ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ನಿರ್ಣಯ ಕೈಗೊಳ್ಳುವಲ್ಲಿ ತೋರಿದ ಬಿಕ್ಕಟ್ಟಿನ ಕುರಿತು ತನಿಖೆ ಆಗಬೇಕು ಎಂದು ಪ್ರಭಾವಿ ಸೆನೆಟರ್​ಗಳ ಗುಂಪು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸಿದೆ. ಅಲ್ಲದೆ, ಈ ಸಂಬಂಧ ಅಮೆರಿಕದ ಮಿತ್ರರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿಯನ್ ರಾಷ್ಟ್ರಗಳ ಜತೆಗೆ ಕೆಲಸ ಶುರುಮಾಡಬೇಕು ಎಂದು ಒತ್ತಡ ಹೇರಿದ್ದಾರೆ.

ಫ್ಲೋರಿಡಾದ ರಿಪಬ್ಲಿಕನ್ ಸೆನೆಟರ್ ಮ್ಯಾಕ್ರೋ ರುಬಿಯೋ ನೇತೃತ್ವದ ಈ ತಂಡದಲ್ಲಿ ಸೆನೆಟರ್​ಗಳಾದ ಮಾರ್ಷಾ ಬ್ಲ್ಯಾಕ್​ಬರ್ನ್​, ಥೋಮ್​ ಟಿಲಿಸ್​, ಜಾನ್​ ಕೋರ್ನಿನ್​, ರೋಜರ್ ವಿಕರ್, ಟೆಡ್ ಕ್ರೂಝ್​, ಡ್ಯಾನ್ ಸುಲ್ಲಿವಾನ್ ಮತ್ತು ಮೈಕ್​ ಲೀ ಇದ್ದು, COVID19 ರೆಸ್ಪಾನ್ಸ್ ಮತ್ತು ಅದಕ್ಕೆ ಸಂಬಂಧಿತ ವಿಚಾರಗಳ ತನಿಖೆಗಾಗಿ ಉನ್ನತ ಮಟ್ಟದ ನಿಯೋಗಕ್ಕೆ ನಾಯಕನನ್ನು ನೇಮಿಸುವಂತೆಯೂ ಟ್ರಂಪ್ ಅವರನ್ನು ಆಗ್ರಹಿಸಿದ್ದಾರೆ.

ತನಿಖೆಗೊಳಪಡಬೇಕಾದ ಅಂಶಗಳೇನು?: ಚೀನಾದ ವುಹಾನ್​ನಲ್ಲಿ ಬಯಲಾದ COVID19 ನೋವೆಲ್ ಕರೊನಾ ವೈರಸ್​ ಎಲ್ಲಿಂದ ಹೊರಬಿತ್ತು ಎಂಬ ಅಂಶದಿಂದ ಹಿಡಿದು ಅದನ್ನು ಮುಚ್ಚಲು ಚೀನೀಸ್ ಕಮ್ಯೂನಿಸ್ಟ್​ ಪಾರ್ಟಿ ಏನೇನು ಕಸರತ್ತು ಮಾಡಿದೆ ಎಂಬ ಅಂಶವೂ ಸೇರಿ ಎಲ್ಲ ರೀತಿಯಲ್ಲೂ ತನಿಖೆ ಆಗಬೇಕು ಎಂಬ ಆಗ್ರಹವನ್ನು ಸೆನೆಟರ್​ಗಳು ಮಾಡಿದ್ದಾರೆ.

ಒಮ್ಮೆ ಈ ಸೋಂಕು ನಿಯಂತ್ರಣಕ್ಕೆ ಬಂದ ಕೂಡಲೇ ಅಂತಾರಾಷ್ಟ್ರೀಯ ಮಟ್ಟದ ತನಿಖೆ ಆಗಬೇಕು. ಚೀನಾ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹೇಗೆ ಶೋಷಣೆಗೊಳಪಡಿಸುತ್ತಿದೆ ಎಂಬುದೂ ಜಗತ್ತಿಗೆ ಮನದಟ್ಟಾಗಬೇಕು. ಸೆಕ್ರೆಟರಿ ಮೈಕ್ ಪೊಂಪಿಯೋ ಮತ್ತು ಇತರೆ ಆಡಳಿತಾಧಿಕಾರಿಗಳು ಈ ವಿಚಾರವಾಗಿ ಕೆಲಸ ಮಾಡುವಂತೆ ನೀವು ನಿರ್ದೇಶನ ನೀಡಬೇಕು ಎಂದು ಟ್ರಂಪ್​ಗೆ ಸೆನೆಟರ್​ಗಳು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net