

Trump Tariffs: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸುಂಕ ಸಮರ ಇದೀಗ ಆ್ಯಪಲ್ ಸಂಸ್ಥೆ ಮೇಲೆ ತಿರುಗಿದೆ. ಇತ್ತೀಚೆಗಷ್ಟೇ ಐಫೋನ್ಗಳ ತಯಾರಿಕೆಯ ಬಗ್ಗೆ ಮಾತನಾಡಿದ ಟ್ರಂಪ್, ಮತ್ತೊಮ್ಮೆ ಆ್ಯಪಲ್ಗೆ ಎಚ್ಚರಿಕೆ ರವಾನಿಸಿದ್ದಾರೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್ಗಳನ್ನು ಇಲ್ಲಿಯೇ ತಯಾರಿಸಬೇಕೇ ವಿನಃ ಭಾರತದಲ್ಲಿ ಅಥವಾ ಇನ್ಯಾವುದೋ ದೇಶಗಳಲ್ಲಿ ಅಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಂಪ್, ಆ್ಯಪಲ್ ಸಿಇಒ ಟಿಮ್ ಕುಕ್ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದಾರೆ. ಭಾರತದಲ್ಲಿ ಐಫೋನ್ ಉತ್ಪಾದನಾ ಘಟಕಗಳನ್ನು ನಿರ್ಮಿಸದಂತೆ ಎಚ್ಚರಿಕೆ ನೀಡಿರುವುದಾಗಿ ವರದಿಗಳು ತಿಳಿಸಿವೆ. ಟ್ರಂಪ್ ಅಮೆರಿಕದಲ್ಲಿ ಐಫೋನ್ಗಳನ್ನು ತಯಾರಿಸುವಂತೆ ತಂತ್ರಜ್ಞಾನ ಕಂಪನಿಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿರುವುದು ಸ್ಪಷ್ಟ. ಸಂಸ್ಥೆಯು ಸುಂಕವಿಲ್ಲದೆ ತನ್ನ ಉತ್ಪನ್ನಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿರುವುದು ಇದೀಗ ಹಲವರ ಹುಬ್ಬೇರಿಸಿದೆ.
ಆ್ಯಪಲ್ ಸಂಸ್ಥೆಗೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ಕೊಡುತ್ತಿದ್ದಂತೆ ಸಂಸ್ಥೆಯ ಷೇರುಗಳು ಶುಕ್ರವಾರ ಶೇ.2.5ರಷ್ಟು ಕುಸಿಯಿತು. ಈ ಸಂದರ್ಭದಲ್ಲಿ, ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ (ಜಿಟಿಆರ್ಐ) ತನ್ನ ವರದಿಯಲ್ಲಿ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದ್ದು, ಭಾರತದಲ್ಲಿ ತಯಾರಾಗುವ ಐಫೋನ್ಗಳು ಯುಎಸ್ಗಿಂತಲೂ ಅಗ್ಗ ಎಂಬ ಅಚ್ಚರಿ ಸಂಗತಿಯನ್ನು ಬಿಚ್ಚಿಟ್ಟಿದೆ.
ಭಾರತದಲ್ಲಿ ತಯಾರಾದ ಐಫೋನ್ಗಳ ಮೇಲಿನ ಅಮೆರಿಕದ ಸುಂಕಗಳ ಹೊರತಾಗಿಯೂ, ಭಾರತದಲ್ಲಿ ಐಫೋನ್ಗಳನ್ನು ತಯಾರಿಸುವ ವೆಚ್ಚವು ಅಮೆರಿಕಗಿಂತ ಇನ್ನೂ ಕಡಿಮೆ ಎಂದು ಜಿಟಿಆರ್ಐ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಭಾರತದಲ್ಲಿ ಕಡಿಮೆ ಉತ್ಪಾದನಾ ವೆಚ್ಚ ಮತ್ತು ಸರ್ಕಾರದ ಪ್ರೋತ್ಸಾಹಗಳು ಇದಕ್ಕೆ ಕಾರಣವಾಗಿವೆ ಎಂದು ತಿಳಿಸಿದೆ.
ಟ್ರಂಪ್ ನುಡಿದಂತೆ ಅಮೆರಿಕ ಭಾರತದಲ್ಲಿ ತಯಾರಿಸಿದ ಐಫೋನ್ಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದರೆ, ಆ್ಯಪಲ್ ಭಾರತದಲ್ಲಿ ಫೋನ್ಗಳನ್ನು ತಯಾರಿಸುವ ಮೂಲಕ ಹಣವನ್ನು ಉಳಿಸುತ್ತದೆ. ಇದು ಲಾಜಿಕ್ನಂತೆ ಕಾಣಿಸಿದರೂ ಮುಂದಿನ ಸವಾಲುಗಳು ಹೇಗಿರಬಹುದು ಎಂಬುದು ಕಾಡುವ ಪ್ರಶ್ನೆಯೇ,(ಏಜೆನ್ಸೀಸ್).