

Sarfaraz Khan: ಇದೇ ಜೂನ್ನಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಶುಭಮನ್ ಗಿಲ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಆಡಲಿದೆ. ಉಪನಾಯಕನಾಗಿ ರಿಷಭ್ ಪಂತ್ ತಂಡದಲ್ಲಿ ಕಾಣಿಸಿಕೊಂಡರೆ, ಈ ಹಿಂದೆಯೇ ಊಹಿಸಿದ್ದ ಹಲವರು ಟೀಮ್ನಲ್ಲಿ ಸ್ಥಾನ ಪಡೆದಿದ್ದಾರೆ. ಇದೆಲ್ಲದರ ನಡುವೆ ಇಂಗ್ಲೆಂಡ್ ಟೂರ್ಗಾಗಿಯೇ ಮೈದಾನದಲ್ಲಿ ಬಹಳ ಕಸರತ್ತು ನಡೆಸಿದ್ದ ಸರ್ಫರಾಜ್ ಖಾನ್, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಆಸೆಯಿಂದ ಬರೋಬ್ಬರಿ 10 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಇಷ್ಟಾದರೂ ಬಿಸಿಸಿಐ ಮಾತ್ರ ಸರ್ಫರಾಜ್ಗೆ ಅವಕಾಶ ಕಲ್ಪಿಸಿಕೊಡಲಿಲ್ಲ. ಸದ್ಯ ಇದೇ ಈಗ ಹಲವರ ಪ್ರಶ್ನೆಗೆ, ಬೇಸರಕ್ಕೆ ಕಾರಣವಾಗಿದೆ.
ಈ ವಿಚಾರ ಜಾಲತಾಣದಲ್ಲಿ ಚರ್ಚೆಯಾಗಿದ್ದು, ನೆಟ್ಟಿಗರು ಸರ್ಫರಾಜ್ ಖಾನ್ ಆಯ್ಕೆ ಕುರಿತು ಪ್ರಶ್ನಿಸಿದ್ದರು. ಬಿಸಿಸಿಐ ಏಕೆ ಸರ್ಫರಾಜ್ ಖಾನ್ರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡದಿಂದ ಕೈಬಿಟ್ಟಿತು ಎಂಬುದರ ಕುರಿತು ಇದೀಗ ಸ್ವತಃ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಪ್ರತಿಕ್ರಿಯಿಸಿದ್ದಾರೆ. "ನಮ್ಮ ಈ ನಿರ್ಣಯ ಒಬ್ಬರಿಗೆ ಬಹಳ ಕಠಿಣ ಆದರೆ, ಮತ್ತೊಬ್ಬರಿಗೆ ಖುಷಿ ತಂದಿದೆ. ಸದ್ಯ, ಕರುಣ್ ನಾಯರ್ ದೇಶಿಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಹಲವು ಪಂದ್ಯಗಳನ್ನು ಆಡಿದ್ದಾರೆ. ಇಂಥಾ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ. ಕಿವೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸರ್ಫರಾಜ್ ಶತಕ ಗಳಿಸಿದರು. ಆದರೆ, ಮುಂದಿನ ಪಂದ್ಯಗಳಲ್ಲಿ ಅವರು ತಮ್ಮ ಫಾರ್ಮ್ನ ಉಳಿಸಿಕೊಳ್ಳಲಿಲ್ಲ. ಈ ಕಾರಣಗಳೇ ತಂಡ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ" ಎಂದು ಅಜಿತ್ ಹೇಳಿದ್ದಾರೆ.
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್ ಮತ್ತು ಕುಲದೀಪ್ ಯಾದವ್ ಸೇರಿ 18 ಜನ ತಂಡದಲ್ಲಿ ಸ್ಥಾವ ಪಡೆದಿದ್ದಾರೆ. (ಏಜೆನ್ಸೀಸ್).