

Trump Decision: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಮೊದಲು ಮೂಗು ತೂರಿಸಿದ್ದ ಅಮೆರಿಕ, ಇರಾನ್ನ ಪರಮಾಣು ನೆಲೆಗಳ ಮೇಲೆ ಬಾಂಬರ್ ದಾಳಿ ನಡೆಸಿತ್ತು. ಅದಾದ ಕೆಲವೇ ದಿನಗಳಲ್ಲಿ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಿಸುವಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದರು. ಇದೆಲ್ಲದರ ಮಧ್ಯೆ ಭಾರತದೊಂದಿಗೆ ದೊಡ್ಡ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುವುದಾಗಿ ಸುಳಿವು ಕೊಟ್ಟ ಟ್ರಂಪ್, ಇದೀಗ ಕೆನಡಾ ವಿಷಯದಲ್ಲಿ ಅಚ್ಚರಿ ನಿರ್ಧಾರ ಕೈಗೊಂಡಿದ್ದಾರೆ.
ಕೆನಡಾ ದೇಶದೊಂದಿಗೆ ನಮಗೆ ಯಾವುದೇ ವ್ಯಾಪಾರ ಬೇಡ. ಅವರೊಂದಿಗೆ ವ್ಯಾಪಾರ ಮಾತುಕತೆಗಳನ್ನು ತಕ್ಷಣವೇ ರದ್ದುಗೊಳಿಸಿ ಎಂದು ಟ್ರಂಪ್ ಆದೇಶಿಸಿದ್ದಾರೆ. ಕೆನಡಾ ರಾಜ್ಯಧಾನಿ ಒಟ್ಟಾವಾ ಒಂದು ವಾರದೊಳಗೆ ತನ್ನ ಸುಂಕದ ದರದ ಬಗ್ಗೆ ಮಾಹಿತಿ ಪಡೆಯಲಿದೆ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.
"ಕೆನಡಾ ದೇಶದೊಂದಿಗೆ ವ್ಯಾಪಾರ ಮಾಡೋದು ಅತ್ಯಂತ ಕಠಿಣ. ಮುಂದಿನ ದಿನಗಳಲ್ಲಿ ನಮಗೆ (ಅಮೆರಿಕ) ಕೆನಡಾದೊಂದಿಗೆ ಯಾವ ವ್ಯಾಪಾರ-ವ್ಯವಹಾರ ಕುರಿತಾದ ಚರ್ಚೆಗಳು ಅಗತ್ಯವಿಲ್ಲ. ಇದನ್ನೆಲ್ಲ ಇಲ್ಲಿಗೆ ಕೊನೆಗೊಳಿಸುತ್ತಿದ್ದೇವೆ. ಈ ಆದೇಶ ತಕ್ಷಣವೇ ಜಾರಿಗೆ ಬರಲಿದೆ" ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
"ಹಲವು ವರ್ಷಗಳಿಂದ ನಮ್ಮ ರೈತರಿಂದ ಪಡೆಯುತ್ತಿರುವ ಡೈರಿ ಉತ್ಪನ್ನಗಳ ಮೇಲೆ ಶೇ.400ರಷ್ಟು ಸುಂಕವನ್ನು ವಿಧಿಸುತ್ತಿರುವುದರಿಂದ ಕೆನಡಾ ಜೊತೆಗೆ ವ್ಯಾಪಾರ ಮಾಡುವುದು ಕಷ್ಟಸಾಧ್ಯ. ನಮ್ಮ ಅಮೇರಿಕನ್ ತಂತ್ರಜ್ಞಾನ ಕಂಪನಿಗಳ ಮೇಲೆ ಡಿಜಿಟಲ್ ಸೇವಾ ತೆರಿಗೆಯನ್ನು ವಿಧಿಸುವುದಾಗಿಯೂ ಘೋಷಿಸಿದೆ ಎಂದು ನಮಗೆ ಹೇಳಲಾಗಿದೆ. ಇದು ನಮ್ಮ ದೇಶದ ಮೇಲೆ ನೇರ ಮತ್ತು ಸ್ಪಷ್ಟ ದಾಳಿಯಾಗಿದೆ. ಇಲ್ಲಿ ಅವರು ಸ್ಪಷ್ಟವಾಗಿ ಯುರೋಪಿಯನ್ ಒಕ್ಕೂಟವನ್ನು ನಕಲು ಮಾಡುತ್ತಿದ್ದಾರೆ. ಸುಂಕಕ್ಕೆ ಸಂಬಂಧಿಸಿದಂತೆ ನಡೆದಿರುವ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಾವು ಕೆನಡಾದೊಂದಿಗೆ ವ್ಯಾಪಾರ ಕುರಿತಾದ ಎಲ್ಲ ಚರ್ಚೆಗಳನ್ನು ಇಂದಿಗೆ ಕೊನೆಗೊಳಿಸುತ್ತಿದ್ದೇವೆ. ಮುಂದಿನ ಏಳು ದಿನಗಳೊಳಗೆ ನಮಗೆ ಪಾವತಿಸಲಿರುವ ಸುಂಕದ ವಿವರವನ್ನು ನಾವು ಕೆನಡಾಕ್ಕೆ ತಿಳಿಸುತ್ತೇವೆ. ಈ ವಿಷಯದ ಬಗ್ಗೆ ಗಮನ ತೋರಿದ್ದಕ್ಕೆ ಧನ್ಯವಾದಗಳು!" ಎಂದು ಬರೆದುಕೊಂಡಿದ್ದಾರೆ.