

Sunil Gavaskar: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತ ಸೋಲುಂಡಿತು. ಇದೀಗ ಎರಡನೇ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸುತ್ತಿದೆ. ಇದೇ ಸಮಯದಲ್ಲಿ ಇಂಗ್ಲೆಂಡ್ನಲ್ಲಿಯೇ ಉಳಿದುಕೊಂಡಿರುವ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ನೆಟ್ಟಿಗರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಸದಾ ತಮ್ಮ ದಿಟ್ಟ ಹಾಗೂ ನೇರನುಡಿ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಗವಾಸ್ಕರ್, ಕಳೆದ ಕೆಲವು ದಿನಗಳಿಂದ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೇಕ್ ಸುದ್ದಿಗಳಿಗೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ್ದಾರೆ. ಕೆಲವು ವೆಬ್‌ಸೈಟ್‌ಗಳು ಮತ್ತು ಸೋಷಿಯಲ್ ಮೀಡಿಯಾ ಖಾತೆಗಳು ತಮ್ಮ ಹೆಸರಿನಲ್ಲಿ ನಕಲಿ ಸುದ್ದಿಗಳನ್ನು ಹರಡುತ್ತಿವೆ ಮತ್ತು ಅವುಗಳನ್ನು ಯಾವುದೇ ಕಾರಣಕ್ಕೂ ಕುರುಡಾಗಿ ನಂಬಬೇಡಿ ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಸಿದ್ದಾರೆ.
“ಕಳೆದ ಕೆಲವು ತಿಂಗಳುಗಳಿಂದ, ಕೆಲವು ಕ್ರೀಡಾ ವೆಬ್‌ಸೈಟ್‌ಗಳು ಮತ್ತು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳು ನನ್ನ ಹೆಸರಿನಲ್ಲಿ ಹೇಳಿಕೆಗಳನ್ನು ತಿರುಚಿ ಮತ್ತು ಕಪೋಲಕಲ್ಪಿತ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿವೆ. ದಯವಿಟ್ಟು ಇದನ್ನೆಲ್ಲ ಓದುವ ನೆಟ್ಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು, ದಯಮಾಡಿ ಎಲ್ಲವನ್ನೂ ಸರಿಯಾಗಿ ಪರಿಶೀಲಿಸಿ ನೋಡಿ. ಕುರುಡಾಗಿ ನಂಬಬೇಡಿ. ಅವುಗಳಲ್ಲಿ ಎಷ್ಟು ಸತ್ಯಾಸತ್ಯತೆ ಇದೆ ಎಂಬುದನ್ನು ಫ್ಯಾಕ್ಟ್-ಚೆಕ್ ಮಾಡಿಕೊಳ್ಳಿ. ಹೆಚ್ಚಾಗಿ ಪರ್ಸನಲ್ ಅಕೌಂಟ್ಗಳಿಂದ ಹೊರಬರುವ ಪೋಸ್ಟ್‌ಗಳೊಂದಿಗೆ ಜಾಗರೂಕರಾಗಿರಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).