

Gold Rate: ಏಪ್ರಿಲ್ನಿಂದ ಮದುವೆ ಸೀಸನ್ ಬಿಜಿಯಲ್ಲಿರುವ ಚಿನ್ನದ ಗ್ರಾಹಕರಿಗೆ ದರ ಇಳಿಕೆ ಸುದ್ದಿ ಸದ್ಯ ದೂರದ ಮಾತಾಗಿದೆ. ಗೋಲ್ಡ್ ಖರೀದಿಸಲು ಹಪಾಹಪಿಯಲ್ಲಿರುವ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟಿರುವ ಚಿನ್ನ, 1 ಲಕ್ಷ ರೂ. ಗಡಿದಾಟುವತ್ತ ಮುಖಮಾಡಿದೆ. ಕಳೆದ ತಿಂಗಳ ಕೊನೆಯ ವಾರದವರೆಗೆ 90,000 ರೂ.ಗೆ ಕುಸಿದಿದ್ದ ಚಿನ್ನದ ದರ, ಬ್ಯಾಕ್ ಟು ಬ್ಯಾಕ್ ಏರಿಕೆ ಕಾಣುತ್ತಲೇ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆಯ ಬೆನ್ನಲ್ಲೇ ಚಿನ್ನದ ಬೆಲೆ ತೀವ್ರವಾಗಿ ಏರಿಕೆ ಕಂಡಿದೆ. ಆಗಸ್ಟ್ 1ರಿಂದ ಮೆಕ್ಸಿಕೋ ಮತ್ತು ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.30ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ಹಿನ್ನಲೆ ಜಾಗತಿಕ ಮಾರುಕಟ್ಟೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಇದರ ಪರಿಣಾಮವಾಗಿ, ಹೂಡಿಕೆದಾರರು ಸುರಕ್ಷಿತ ತಾಣ ಚಿನ್ನದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸಿರುವುದು ಗಮನಾರ್ಹ.
ಇಂದು (ಜು.14) ಚಿನ್ನದ ಬೆಲೆ ಮೂರು ವಾರಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, ಬೆಳ್ಳಿ ಕೂಡ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಕಳೆದ ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಣನೀಯವಾಗಿ ಏರಿಕೆಯಾಗಿವೆ. ಕಳೆದ ಒಂದು ವಾರದಲ್ಲಿ ಚಿನ್ನದ ದರ 1,700 ರೂ. ಹೆಚ್ಚಳ ಕಂಡಿದೆ. ಸೋಮವಾರ ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 170 ರೂ. ಏರಿದರೆ, 22 ಕ್ಯಾರೆಟ್ ಚಿನ್ನದ ಬೆಲೆ 150 ರೂ. ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕೂಡ ಏರಿಕೆಯಾಗಿದ್ದು, ಸೋಮವಾರ ಬೆಳಗ್ಗೆ ಒಂದು ಔನ್ಸ್ ಚಿನ್ನ 3,357 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಬೆಳ್ಳಿ ಕೂಡ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ,(ಏಜೆನ್ಸೀಸ್).