

Trump-Putin: ಯುಕ್ರೇನ್ ಮೇಲಿನ ಯುದ್ಧವನ್ನು ಕೈಬಿಡುವಂತೆ ರಷ್ಯಾಗೆ ಗಡುವು ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಎಲ್ಲ ಬೆಳವಣಿಗೆಯ ನಡುವೆಯೇ ರಷ್ಯಾದೊಂದಿಗೆ ಮಾತುಕತೆ ನಡೆಸಲು ಎದುರುನೋಡುತ್ತಿದ್ದಾರೆ. ಆ.15ರಂದು ಎರಡು ಬಲಿಷ್ಠ ರಾಷ್ಟ್ರಗಳ ನಾಯಕರು, ಅಮೆರಿಕದ ಶ್ವೇತಭವನದ ಬದಲಿಗೆ ಅಲಾಸ್ಕಾ ರಾಜ್ಯದಲ್ಲಿ ಮಾತುಕತೆ ನಡೆಸಲಿದ್ದಾರೆ. ಇದೇ ಈಗ ಯುಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಮೂಲೆಗುಂಪು ಮಾಡಿದಂತಾಗಿದೆ.
ಯುಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರನ್ನು ಶುಕ್ರವಾರ (ಆ.15) ನಡೆಯಲಿರುವ ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ನಡುವಿನ ಶಾಂತಿ ಮಾತುಕತೆಯಿಂದ ಹೊರಗಿಡಲಾಗಿದೆ. ಇದಕ್ಕೆ ಕಾರಣ, ಈ ಸಭೆಯನ್ನು ಪುಟಿನ್ ಅವರ ಕೋರಿಕೆಯ ಮೇರೆಗೆ ಮಾತ್ರ ಏರ್ಪಡಿಸಲಾಗಿದೆ. 'ಫಾಕ್ಸ್ ನ್ಯೂಸ್' ವರದಿ ಪ್ರಕಾರ, ಯುಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧವನ್ನು ಹೇಗೆ ಕೊನೆಗೊಳಿಸುವುದು ಎಂಬುದನ್ನು ಅಧ್ಯಕ್ಷ ಟ್ರಂಪ್ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಈ ಸಭೆಯ ಉದ್ದೇಶವಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಅಧ್ಯಕ್ಷ ಪುಟಿನ್ ಅವರ ಕೋರಿಕೆಯ ಮೇರೆಗೆ ಅಧ್ಯಕ್ಷರು ಈ ಸಭೆಗೆ ಒಪ್ಪಿಕೊಂಡಿದ್ದಾರೆ. ಮತ್ತು ಈ ಯುದ್ಧವನ್ನು ನಾವು ಹೇಗೆ ಕೊನೆಗೊಳಿಸಬಹುದು ಎಂಬುದರ ಕುರಿತು ಉತ್ತಮ ತಿಳುವಳಿಕೆಯೊಂದಿಗೆ ಮಾತುಕತೆ ನಡೆಸುವುದೇ ಈ ಸಭೆಯ ಗುರಿಯಾಗಿದೆ" ಎಂದು ಲೀವಿಟ್ ಒತ್ತಿ ಹೇಳಿದ್ದಾರೆ. ಇದಿಷ್ಟು ಅಮೆರಿಕಾದ ಮಾತುಗಳಾದರೆ. ಅತ್ತ ಯುಕ್ರೇನ್ ಅಧ್ಯಕ್ಷ, "ತಮ್ಮ ಬಳಿಗೆ ಯಾವ ವಿಷಯವನ್ನೂ ಗಮನಕ್ಕೆ ತರದೆ, ಅವರಿಷ್ಟದಂತೆ ಮಾತುಕತೆ ಅಥವಾ ಒಪ್ಪಂದ ಮಾಡಿಕೊಂಡರೆ ಅದನ್ನು ನಾವು ಒಪ್ಪಲ್ಲ" ಎಂದಿದ್ದಾರೆ.
"ಆದಾಗ್ಯೂ, ಯುಕ್ರೇನ್ನ ಒಳಗೊಳ್ಳುವಿಕೆ ಇಲ್ಲದೆ ಮಾಡಿಕೊಳ್ಳಲಾದ ಯಾವುದೇ ಶಾಂತಿ ಒಪ್ಪಂದಗಳು ನಿಷ್ಪರಿಣಾಮ". ನಮ್ಮ ವಿರುದ್ಧ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಅಥವಾ ಯುಕ್ರೇನ್ ಮಧ್ಯಸ್ಥಿಕೆಯಿಲ್ಲದೆ ತೆಗೆದುಕೊಳ್ಳುವ ನಿರ್ಣಯಗಳು ಒಪ್ಪುವಂತದ್ದಲ್ಲ. ಆ ರೀತಿ ತೆಗೆದುಕೊಂಡಿದ್ದೇ ಆದಲ್ಲಿ, ಅವು ಸತ್ತ ನಿರ್ಧಾರಗಳು. ಅದ್ಯಾವುದೂ ಕೆಲಸಕ್ಕೆ ಬಾರದು" ಎಂದು ಟ್ರಂಪ್-ಪುಟಿನ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).