

‘ಆಪ್ತಸ್ನೇಹಿತ’ ಎನ್ನುತ್ತಲೇ ಭಾರತದ ಮೇಲೆ ಶೇಕಡ 25ರಷ್ಟು ಸುಂಕಭಾರ ಹೊರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಪಾಕಿಸ್ತಾನದ ಜತೆ ದೋಸ್ತಿ ಬೆಳೆಸಿದ್ದಾರೆ. ಈ ಮೂಲಕ ಭಾರತವನ್ನು ‘ಬೆದರಿಸಬಹುದು’ ಎಂಬ ಟ್ರಂಪ್ ಲೆಕ್ಕಾಚಾರ ತಲೆಕೆಳಗೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕ್ಷೇತ್ರ ಪರಿಣತರೇ ಹೇಳುತ್ತಿದ್ದಾರೆ. ಅಷ್ಟಕ್ಕೂ, ಪಾಕಿಸ್ತಾನದಲ್ಲಿ ಕಚ್ಚಾ ತೈಲ ನಿಕ್ಷೇಪಗಳಿವೆ ಎಂಬ ಮಾಹಿತಿಯನ್ನು ಟ್ರಂಪ್ ಅವರಿಗೆ ಅದ್ಯಾರು ನೀಡಿದ್ದಾರೋ ಗೊತ್ತಿಲ್ಲ. ಪಾಕ್ನಲ್ಲಿ ಕಚ್ಚಾ ತೈಲ ನಿಕ್ಷೇಪಗಳು ಇದ್ದದ್ದೆ ಹೌದಾದರೆ ಆ ರಾಷ್ಟ್ರವೇಕೆ ತನ್ನ ಬೇಡಿಕೆಯ ಶೇಕಡ 85ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ? ಪಾಕ್ ತನ್ನಲ್ಲಿ ಹೊಂದಿರುವ ಕಚ್ಚಾ ತೈಲ ಭಂಡಾರ ಕೇವಲ 2 ವರ್ಷಗಳಿಗೆ ಸಾಕಾಗುವಷ್ಟಿದೆ. ಇಂಥ ಸಂದರ್ಭದಲ್ಲಿ ಪಾಕ್-ಅಮೆರಿಕ ನಡುವೆ ಏರ್ಪಟ್ಟಿರುವ ಒಪ್ಪಂದ ಕುತೂಹಲ ಮೂಡಿಸಿದೆ.
ಹೀಗಿದೆ ಸ್ಥಿತಿ: ಪಾಕಿಸ್ತಾನದ ಕ್ರೆಡಿಟ್ ರೇಟಿಂಗ್ ಏಜೆನ್ಸಿಯ ವರದಿ ಪ್ರಕಾರ, ಪಾಕಿಸ್ತಾನದಲ್ಲಿ ಬಹುತೇಕ ತೈಲ ನಿಕ್ಷೇಪಗಳು ಬಲೂಚಿಸ್ತಾನ, ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಗಳಲ್ಲಿ ಇವೆ. ಸಿಂಧ್ನಲ್ಲಿ ಅತಿ ಹೆಚ್ಚು ಅಂದರೆ 247 ತೈಲ ನಿಕ್ಷೇಪಗಳಿವೆ. ಪಂಜಾಬ್ನಲ್ಲಿ 33, ಖೈಬರ್ ಪಖ್ತುನ್ಖ್ವಾದಲ್ಲಿ 15 ಹಾಗೂ ಬಲೂಚಿಸ್ತಾನದಲ್ಲಿ 4 ಇವೆ. ಜಾಗತಿಕ ಮಟ್ಟದಲ್ಲಿ ನೋಡುವುದಾದರೆ ತೈಲ ನಿಕ್ಷೇಪಗಳ ಪಟ್ಟಿಯಲ್ಲಿ ಪಾಕಿಸ್ತಾನ 52ನೇ ಸ್ಥಾನದಲ್ಲಿದೆ. 2016ರವರೆಗೆ ಪಾಕ್ ಬಳಿ 35.35 ಕೋಟಿ ಬ್ಯಾರೆಲ್ ಕಚ್ಚಾ ತೈಲವಿತ್ತು (ಒಂದು ಬ್ಯಾರೆಲ್ನಲ್ಲಿ ಸರಾಸರಿ 159 ಲೀಟರ್ ಕಚ್ಚಾತೈಲವಿರುತ್ತದೆ). ಇದು ಜಗತ್ತಿನ ಒಟ್ಟು ತೈಲ ಸಂಗ್ರಹದ ಪೈಕಿ ಶೇ.0.021ರಷ್ಟು ಮಾತ್ರ.
ಪಾಕಿಸ್ತಾನ ಪೆಟ್ರೋಲಿಯಂ ಇನ್ಫಾರ್ವೆಶನ್ ಸರ್ವಿಸಸ್ ವರದಿಯ ಪ್ರಕಾರ 2024ರ ಡಿಸೆಂಬರ್ವರೆಗೆ 238 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವು ನಿಕ್ಷೇಪಗಳಲ್ಲಿ ಲಭ್ಯವಿತ್ತು. ಪಾಕಿಸ್ತಾನಕ್ಕೆ ದಿನಕ್ಕೆ ಬೇಕಾಗುವ ಕಚ್ಚಾತೈಲ ಪ್ರಮಾಣ ಸರಾಸರಿ 5.56 ಲಕ್ಷ ಬ್ಯಾರೆಲ್. ಆದರೆ, ಅದು ಪ್ರತಿನಿತ್ಯ ಉತ್ಪಾದಿಸುವ ಕಚ್ಚಾ ತೈಲ ಪ್ರಮಾಣ ಬರೀ 60 ಸಾವಿರ ಲೀಟರ್. ಅಂದರೆ 4.96 ಲಕ್ಷ ಲೀಟರ್ಗಳ ಕೊರತೆ. ವಿದೇಶಗಳಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸಿಬಿಟ್ಟರೆ ಪಾಕ್ ಬಳಿ ಇರುವುದು 2 ವರ್ಷಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಮಾತ್ರ. ಅಂದರೆ, ಪಾಕಿಸ್ತಾನ ತನ್ನಲ್ಲಿ ಬೇಡಿಕೆ ಇರುವ ಕಚ್ಚಾ ತೈಲದ ಪೈಕಿ ಶೇಕಡ 10-15ರಷ್ಟನ್ನು ಮಾತ್ರ ಉತ್ಪಾದಿಸುತ್ತದೆ. ಉಳಿದ ಶೇ.80-85ರಷ್ಟು ಕಚ್ಚಾ ತೈಲಕ್ಕೆ ಅದು ಹಲವು ದೇಶಗಳ ಮೇಲೆ ಅವಲಂಬಿತವಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ ಭಾರತಕ್ಕೆ ಪಾಕ್ ಕಚ್ಚಾ ತೈಲ ಮಾರಾಟ ಮಾಡಬಹುದು ಎಂಬ ಟ್ರಂಪ್ ಹೇಳಿಕೆ ಹಾಸ್ಯಾಸ್ಪದವಲ್ಲದೆ ಮತ್ತೇನೂ ಅಲ್ಲ.
ಟ್ರುಥ್ ಸೋಶಿಯಲ್ನಲ್ಲಿ ಟ್ರಂಪ್ ಹೇಳಿದ್ದು ಹೀಗೆ:
ನಾವು ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಒಟ್ಟಿಗೆ ಕೆಲಸ ಮಾಡಲಿವೆ. ಈ ಪಾಲುದಾರಿಕೆಯನ್ನು ಮುನ್ನಡೆಸುವ ತೈಲ ಕಂಪನಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಯಾರಿಗೆ ಗೊತ್ತು, ಭವಿಷ್ಯದಲ್ಲಿ ಪಾಕಿಸ್ತಾನದವರು ಭಾರತಕ್ಕೆ ತೈಲವನ್ನು ಮಾರಾಟ ಮಾಡಬಹುದು.
ಕಚ್ಚಾ ತೈಲ ಉತ್ಪಾದನೆಯಲ್ಲಿ ಭಾರತ ಜಾಗತಿಕವಾಗಿ 20ನೇ ಸ್ಥಾನದಲ್ಲಿದೆ. (ಪಾಕಿಸ್ತಾನ 52ನೇ ಸ್ಥಾನ) ಭಾರತದ ತೈಲ ಸಂಗ್ರಹ ಪ್ರಮಾಣ ಪಾಕ್ಗಿಂತ 20 ಪಟ್ಟು ಹೆಚ್ಚಿದೆ. ಭಾರತದಲ್ಲಿ ಪ್ರತಿನಿತ್ಯ 1.1 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಯಾಗುತ್ತಿದೆ. 2016ರಲ್ಲಿ ಭಾರತದ ಬಳಿ 4800 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹವಿತ್ತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ 2022ರ ಏಪ್ರಿಲ್ವರೆಗೆ ಭಾರತದ ಕಚ್ಚಾ ತೈಲ ಸಂಗ್ರಹ 4,981 ಮಿಲಿಯನ್ ಬ್ಯಾರೆಲ್ಗೆ ಏರಿಕೆಯಾಗಿದೆ.
ಇದು ಜಗತ್ತಿನ ತೈಲ ಸಂಗ್ರಹದ ಶೇಕಡ 0.29ರಷ್ಟಿದೆ. ಭಾರತದಲ್ಲಿ ಪ್ರಸ್ತುತ ಅಸ್ಸಾಂ, ಗುಜರಾತ್, ರಾಜಸ್ಥಾನದಲ್ಲಿ ತೈಲ ನಿಕ್ಷೇಪಗಳು ಇವೆ. ಮಾತ್ರವಲ್ಲ, ಅಂಡಮಾನ್, ಮಹಾನದಿ, ಕೇರಳದ ಕಡಲತೀರ, ಬಂಗಾಳದ ಕೆಲ ಪ್ರದೇಶಗಳಲ್ಲಿ ತೈಲ ನಿಕ್ಷೇಪಗಳು ಇರುವ ಮಾಹಿತಿ ಲಭ್ಯವಾಗಿದ್ದು, ಈ ಪ್ರದೇಶಗಳು 22 ಬಿಲಿಯನ್ ಬ್ಯಾರೆಲ್ ತೈಲ ಹೊಂದಿರುವ ಸಾಧ್ಯತೆ ಇದೆ. ಹಾಗಾಗಿ, ಆಯಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾಪೋರೇಶನ್ (ಒಎನ್ಜಿಸಿ) ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ ಮೇಲ್ಕಂಡ ಪ್ರದೇಶಗಳಲ್ಲಿ ತೈಲ ನಿಕ್ಷೇಪಕ್ಕಾಗಿ ಶೋಧಕಾರ್ಯ ಆರಂಭಿಸಿವೆ.