

JD Vance: ಯುಕ್ರೇನ್ ಮೇಲಿನ ರಷ್ಯಾದ ಬಾಂಬ್ ದಾಳಿಯನ್ನು ತಡೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಶೇ 50 ರಷ್ಟು ಸುಂಕ ವಿಧಿಸಿದ್ದಾರೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ.
ಈ ಬಗ್ಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವ್ಯಾನ್ಸ್, ರಷ್ಯನ್ನರು ತಮ್ಮ ತೈಲ ಆರ್ಥಿಕತೆಯಿಂದ ಶ್ರೀಮಂತರಾಗುವುದನ್ನು ತಡೆಯಲು ಟ್ರಂಪ್ ಭಾರತದ ಮೇಲೆ ದ್ವಿತೀಯ ಸುಂಕದ ಆಕ್ರಮಣಕಾರಿ ಆರ್ಥಿಕ ನೀತಿಯನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಷ್ಯಾ ಮತ್ತು ಯುಕ್ರೇನ್ ನಡುವೆ ಶಾಂತಿಯನ್ನು ಸುಗಮಗೊಳಿಸುವ ಅಮೆರಿಕದ ಸಾಮರ್ಥ್ಯದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ ವ್ಯಾನ್ಸ್, ಕಳೆದ ಕೆಲವು ವಾರಗಳಲ್ಲಿ ನಾವು ಈಗಾಗಲೇ ಎರಡೂ ಕಡೆಯಿಂದ ಕೆಲವು ಮಹತ್ವದ ಬದಲಾವಣೆಗಳನ್ನು ನೋಡಿದ್ದೇವೆ ಎಂದು ನಂಬುತ್ತೇವೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ವ್ಯಾನ್ಸ್, ರಷ್ಯಾ ಹತ್ಯೆಯನ್ನು ನಿಲ್ಲಿಸಿದರೆ ವಿಶ್ವ ಆರ್ಥಿಕತೆಗೆ ಮತ್ತೆ ಆಹ್ವಾನಿಸಬಹುದು. ಆದರೆ ರಷ್ಯಾ ಹತ್ಯೆಯನ್ನು ನಿಲ್ಲಿಸದಿದ್ದರೆ ಅವರು ಪ್ರತ್ಯೇಕವಾಗಿ ಉಳಿಯುತ್ತಾರೆ ಎಂದು ಈ ಸಂಧರ್ಭದಲ್ಲಿ ತಿಳಿಸಿದ್ದಾರೆ.
ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುವ ವಿಚಾರದಲ್ಲಿ ಟ್ರಂಪ್ ಆಡಳಿತವು ಭಾರತವನ್ನು ಗುರಿಯಾಗಿಸಿಕೊಂಡು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹದಗೆಟ್ಟಿದೆ. ಈ ತಿಂಗಳ ಆರಂಭದಲ್ಲಿ, ಅಮೆರಿಕದ ಅಧ್ಯಕ್ಷ ಟ್ರಂಪ್, ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ 50 ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರು. ಇದರಲ್ಲಿ ಭಾರತದ ರಷ್ಯಾದ ಕಚ್ಚಾ ತೈಲ ಖರೀದಿಗೆ ಶಿಕ್ಷೆಯಾಗಿ ಹೆಚ್ಚುವರಿ ಶೇಕಡಾ 25 ರಷ್ಟು ಸುಂಕ ವಿಧಿಸಲಾಗಿದೆ.
ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತಿರುವುದು ಯುಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಬೆಂಬಲಿಸುತ್ತಿದೆ ಎಂದು ಅಮೆರಿಕ ಹೇಳಿತ್ತು. ಆದರೆ ಭಾರತ ಈ ಆರೋಪವನ್ನು ದೃಢವಾಗಿ ನಿರಾಕರಿಸಿದೆ.(ಏಜೆನ್ಸೀಸ್)