ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ಅದ್ಧೂರಿ ಸ್ವಾಗತ; ‘ಹಾದಿ ಕಠಿಣವಾಗಲಿದೆ’ ಎಂದ ರಾಯಭಾರಿ! | Xi Jinping- Trump Meeting

ಕ್ಸಿ ಜಿನ್‌ಪಿಂಗ್‌ ಅಮೆರಿಕ ಪ್ರವಾಸದ ಬೆನ್ನಲ್ಲೇ, ಚೀನಾ ಮೇಲಿನ ಅಮೆರಿಕದ ಅವಲಂಬನೆ ಕುರಿತು ರಾಯಭಾರಿ ಡೇವಿಡ್ ಪರ್ಡ್ಯೂ ಎಚ್ಚರಿಕೆ ನೀಡಿದ್ದಾರೆ. ಅಪರೂಪದ ಖನಿಜಗಳು, ಔಷಧಗಳು ಹಾಗೂ ವಾಣಿಜ್ಯ ಹಡಗು ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಚೀನಾ ಮೇಲಿನ ಅವಲಂಬನೆ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
Xi Jinping- Trump Meeting
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
Published on: 

US-China Relations: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಮೆರಿಕ ಪ್ರವಾಸದಲ್ಲಿ ಉಭಯ ದೇಶಗಳ ನಾಯಕರು ಸ್ನೇಹ ಹಾಗೂ ಸಹಕಾರದ ಮಾತುಗಳನ್ನಾಡಿದರೂ, ಚೀನಾ ಮೇಲಿನ ಅಮೆರಿಕದ ಆರ್ಥಿಕ ಅವಲಂಬನೆ ಬಗ್ಗೆ ಆತಂಕ ಮುಂದುವರಿದಿದೆ. ಅವಲಂಬನೆ ತಗ್ಗಿಸುವ ಹಾದಿ ಮುಂದಿನ ದಿನಗಳಲ್ಲಿ ಕಠಿಣವಾಗಿರಬಹುದು ಎಂದು ಅಮೆರಿಕದ ಚೀನಾ ರಾಯಭಾರಿ ಡೇವಿಡ್ ಪರ್ಡ್ಯೂ ಹೇಳಿದ್ದಾರೆ.

ಸೆಪ್ಟೆಂಬರ್ 23ರಿಂದ 25ರವರೆಗೆ ನಡೆದ ಪ್ರವಾಸದಲ್ಲಿ ಕ್ಸಿ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸಿದರು. ಅಧಿಕೃತ ಸ್ವಾಗತ ಹಾಗೂ ರಾಜ್ಯ ಔತಣಕೂಟ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು. ಗೌರವ, ನ್ಯಾಯಸಮ್ಮತತೆ ಮತ್ತು ಪರಸ್ಪರತೆಯ ಆಧಾರದ ಮೇಲೆ ಸ್ಥಿರ ಸಂಬಂಧ ಬೆಳೆಸಲು ಎರಡೂ ದೇಶಗಳು ಒತ್ತು ನೀಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಚೀನಾ ಅವಲಂಬನೆ ಕಡಿಮೆ ಮಾಡಲು ಪರ್ಡ್ಯೂ ಒತ್ತಾಯ

ಕ್ಸಿ ಅವರ ಪ್ರವಾಸ ಮುಗಿದ ಕೆಲವೇ ದಿನಗಳಲ್ಲಿ ಪರ್ಡ್ಯೂ, ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಅಪರೂಪದ ಖನಿಜಗಳು, ಮ್ಯಾಗ್ನೆಟ್‌ಗಳು, ಔಷಧಗಳು ಹಾಗೂ ವಾಣಿಜ್ಯ ಹಡಗು ನಿರ್ಮಾಣದಂತಹ ಕ್ಷೇತ್ರಗಳಲ್ಲಿ ಅವಲಂಬನೆ ತಗ್ಗಿಸಬೇಕಿದೆ ಎಂದಿದ್ದಾರೆ. ಸ್ವಾವಲಂಬನೆ ಸಾಧಿಸುವವರೆಗೆ ಮುಂದಿನ ಒಂದು ವರ್ಷ ‘ಕಠಿಣ ಹಾದಿ’ ಆಗಬಹುದು ಎಂದು ಹೇಳಿದ್ದಾರೆ.

ವ್ಯಾಪಾರ, ಎಐ ಬಗ್ಗೆಯೂ ಚರ್ಚೆ

ಕ್ಸಿ-ಟ್ರಂಪ್ ಮಾತುಕತೆಯಲ್ಲಿ ವ್ಯಾಪಾರ, ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಿವೆ. ಎಪೆಕ್ ಹಾಗೂ ಜಿ20 ಸಭೆಗಳನ್ನು ಯಶಸ್ವಿಯಾಗಿ ನಡೆಸಲು ಪರಸ್ಪರ ಸಹಕಾರ ನೀಡುವ ಬಗ್ಗೆಯೂ ನಾಯಕರು ಚರ್ಚಿಸಿದ್ದಾರೆ. ಭಿನ್ನಾಭಿಪ್ರಾಯಗಳಿದ್ದರೂ ಸಂವಹನ ಮತ್ತು ಸಹಕಾರ ಮುಂದುವರಿಸಬೇಕು ಎಂದು ಕ್ಸಿ ಹೇಳಿದ್ದಾರೆ.

ಅಪರೂಪದ ಖನಿಜಗಳದ್ದೇ ಟೆನ್ಶನ್

ಅಪರೂಪದ ಖನಿಜಗಳು ಹಾಗೂ ಅವುಗಳಿಂದ ತಯಾರಾಗುವ ಮ್ಯಾಗ್ನೆಟ್‌ಗಳು ರಕ್ಷಣಾ, ವಾಹನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಪ್ರಮುಖವಾಗಿವೆ. ಹೀಗಾಗಿ ಪೂರೈಕೆ ಸರಪಳಿಯಲ್ಲಿ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಅಮೆರಿಕ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಪಾಠ ಮಾಡೋ ಬದಲು ಮೊಬೈಲ್ ಗೇಮ್; ವಿದ್ಯಾರ್ಥಿನಿಯರ ಬಳಿ Instagram ID ಕೇಳಿದ ಶಿಕ್ಷಕ? | Teacher Controversy

ಕ್ಸಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದರೂ, ವ್ಯಾಪಾರ ಮತ್ತು ಪೂರೈಕೆ ಸರಪಳಿ ವಿಚಾರದಲ್ಲಿ ಉಭಯ ದೇಶಗಳ ನಡುವಿನ ಭಿನ್ನತೆಗಳು ಮುಂದುವರಿದಿವೆ ಎಂಬುದು ಪರ್ಡ್ಯೂ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net