

Trump: ಶಿವನ ದೇಗುಲದ ವಿಚಾರಕ್ಕೆ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಭುಗಿಲೆದ್ದ ಸಂಘರ್ಷ, ಅಮಾಯಕರ ಪ್ರಾಣವನ್ನು ಕಸಿದುಕೊಂಡಿತು. ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದಂತೆಯೇ ಮಧ್ಯಸ್ಥಿಕೆ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಡೆಗೂ ಶಾಂತಿ ಒಪ್ಪಂದಕ್ಕೆ ಕರೆತರುವಲ್ಲಿ ಮೇಲುಗೈ ಸಾಧಿಸಿದ್ದಾರೆ.
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಯುದ್ಧದ ಕಾರ್ಮೋಡ ಕವಿದ ಬೆನ್ನಲ್ಲೇ ಇತರೆ ದೇಶಗಳ ಯುದ್ಧ ಸಂಘರ್ಷವನ್ನು ತಡೆಯುವಲ್ಲಿ ತಾನು ಸದಾ ಮುಂದೆ ಎಂದು ಹೇಳಿಕೊಳ್ಳುವ ಟ್ರಂಪ್, ಇಲ್ಲಿಯೂ ತಮ್ಮ ಮಧ್ಯಸ್ಥಿಕೆಯನ್ನು ತೋರಿದ್ದಾರೆ. ಈ ಎರಡೂ ದೇಶಗಳ ಮಧ್ಯೆ ಹೆಚ್ಚುತ್ತಿದ್ದ ಸಂಘರ್ಷವನ್ನು ಶಾಂತಿಯತ್ತ ಸಾಗಿಸಬೇಕೆಂದು ಪಣತೊಟ್ಟ ಟ್ರಂಪ್, ಮಧ್ಯಸ್ಥಿಕೆ ವಹಿಸುತ್ತಿರುವುದಾಗಿ ಘೋಷಿಸಿದ್ದರು. ಶೀಘ್ರದಲ್ಲೇ ಇದೆಲ್ಲವೂ ಕೊನೆಗೊಳ್ಳಲಿವೆ ಎಂದೂ ಹೇಳಿದ್ದರು. ಅಂತೆಯೇ ಅಮೆರಿಕ ಅಧ್ಯಕ್ಷರ ಮಾತಿಗೆ ಎರಡು ದೇಶಗಳು ಇದೀಗ ಒಪ್ಪಿಗೆ ಸೂಚಿಸಿವೆ.
ಕದನ ವಿರಾಮಕ್ಕೆ ಸಂಬಂಧಿಸಿದಂತೆ ಕಾಂಬೋಡಿಯನ್ ಪ್ರಧಾನಿ ಹುನ್ ಸೇನ್ ಮತ್ತು ಥೈಲ್ಯಾಂಡ್ ಮಧ್ಯಂತರ ಪ್ರಧಾನಿ ಫುಮ್ಥಾಮ್ ವೆಚಾಯಾಚೈ ಅವರೊಂದಿಗೆ ಮಾತನಾಡಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಜಾಲತಾಣದ ಖಾತೆಯಲ್ಲಿ ತಿಳಿಸಿದ್ದಾರೆ. ಕೂಡಲೇ ಜಾರಿಗೆ ಬರುವಂತೆ ಕದನ ವಿರಾಮ ಮತ್ತು ಶಾಂತಿ ಮಾತುಕತೆಗೆ ಎರಡೂ ದೇಶಗಳು ಒಪ್ಪಿಕೊಂಡಿದೆ. ಈ ವಿಷಯವನ್ನು ಚರ್ಚಿಸಲು ತಕ್ಷಣದ ಭೇಟಿಗೂ ಅಸ್ತು ಎಂದಿವೆ. ಆದಾಗ್ಯೂ, ಶಾಂತಿ ಮಾತುಕತೆ ಎಲ್ಲಿ ನಡೆಯುತ್ತದೆ ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.
ಇತ್ತೀಚೆಗಷ್ಟೇ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವನ್ನು ನಿಲ್ಲಿಸಿದ ಟ್ರಂಪ್, ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಘರ್ಷವನ್ನು ತಡೆದಿದ್ದು ನಾನೇ. ನನ್ನ ಮಧ್ಯಸ್ಥಿಕೆಯಿಂದ ಆ ಎರಡೂ ದೇಶಗಳು ಯುದ್ಧ ಭೀತಿಯಿಂದ ಹೊರಬಂದಿತು. ಇದು ನನ್ನಿಂದ ಸಾಧ್ಯವಾಯಿತು ಎಂದು ಹೋದಲೆಲ್ಲ ಟ್ರಂಪ್ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಕಂತೆ, ಅಮೆರಿಕಾದ ಶ್ವೇತಭವನ ಕೂಡ ಕಳೆದ ಆರು ತಿಂಗಳಲ್ಲಿ ಟ್ರಂಪ್ ಸಾಧನೆಯ ಪಟ್ಟಿಯಲ್ಲಿ ಈ ವಿಚಾರವನ್ನು ಸೇರಿಸಿದ್ದು, ಅನೇಕ ಭಾರತೀಯರ ಕೆಂಗಣ್ಣಿಗೆ ಗುರಿಯಾಯಿತು,(ಏಜೆನ್ಸೀಸ್).
ಕಾಂಬೋಡಿಯಾದ ಡೊಂಗ್ರೆಕ್ ಪರ್ವತಗಳಲ್ಲಿ 525 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ 900 ವರ್ಷಗಳಷ್ಟು ಹಳೆಯದಾದ ಪ್ರಿಯಾ ವಿಹಿಯರ್ ದೇವಾಲಯವು ಪರಮಾತ್ಮನಿಗೆ ಸಮರ್ಪಿತವಾದ ದೇವಸ್ಥಾನ ಎನ್ನಲಾಗಿದೆ. ಇದನ್ನು ಖಮೇರ್ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಕಾಂಬೋಡಿಯನ್ನರಿಗೆ ಮಾತ್ರವಲ್ಲದೆ ಥೈಸ್‌ನವರಿಗೂ ಪವಿತ್ರ ಸ್ಥಳ ಎಂಬುದು ಗಮನಾರ್ಹ. ಇದರಿಂದ ಸುಮಾರು 95 ಕಿಲೋಮೀಟರ್ ಪಶ್ಚಿಮಕ್ಕೆ 12ನೇ ಶತಮಾನದ ತಾ ಮುಯೆನ್ ಥಾಮ್ ಶಿವ ದೇವಾಲಯವಿದೆ.
ದಶಕಗಳಿಂದ, ದೇವಾಲಯ ಸಂಕೀರ್ಣವು ಎರಡು ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ದೇಗುಲದ ವಿಚಾರದಲ್ಲಿ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಘರ್ಷಣೆಗಳು ನಡೆಯುತ್ತಿವೆ. ಗುರುವಾರ (ಜು.24) ಥೈಲಾಂಡ್-ಕಾಂಬೋಡಿಯನ್ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿದ್ದು, ದಾಳಿಯಲ್ಲಿ 12 ಜನರು ಮೃತಪಟ್ಟರೆ, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ಕಾಂಬೋಡಿಯನ್ ಸೇನೆಯು ಥೈಲಾಂಡ್ ಮಿಲಿಟರಿ ನೆಲೆಗಳ ಮೇಲೆ ಹದ್ದಿನ ಕಣ್ಣಿಡಲು ಡ್ರೋನ್‌ಗಳನ್ನು ಕಳುಹಿಸಿದ ಬೆನ್ನಲ್ಲೇ ಘರ್ಷಣೆ ಭುಗಿಲೆದ್ದಿತು.