ಮಿಷಿಗನ್​ ಮತ್ತು ಜಾರ್ಜಿಯಾದಲ್ಲಿ ಕಾನೂನು ಹೋರಾಟ ಸೋತ ಟ್ರಂಪ್​

Trump
Published on

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷೀಯ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದ್ದು, ಹಾಲಿ ಅಧ್ಯಕ್ಷ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೋಲಿನ ಭೀತಿ ಎದುರಿಸಿದ್ದಾರೆ. ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಅವರು ಗೆಲುವಿನ ಸಮೀಪದಲ್ಲಿದ್ದಾರೆ. ಈ ನಡುವೆ, ಚುನಾವಣಾ ಅಕ್ರಮವಾಗಿದೆ ಎಂದು ಆರೋಪಿಸಿ ಟ್ರಂಪ್​ ಪರವಾಗಿ ನಿನ್ನೆ ಸಲ್ಲಿಕೆಯಾಗಿದ್ದ ದಾವೆಯನ್ನು ಮಿಷಿಗನ್ ಮತ್ತು ಜಾರ್ಜಿಯಾ ಕೋರ್ಟ್​ಗಳು ತಿರಸ್ಕರಿಸಿವೆ.

ಮಿಷಗನ್​ನಲ್ಲಿ ಕೋರ್ಟ್​ನಲ್ಲಿ ಗೈರಾದವರ ಮತಗಳನ್ನು ಪರಿಗಣಿಸದಂತೆ ಅರ್ಜಿ ಸಲ್ಲಿಕೆಯಾಗಿತ್ತು. ಇದೇ ವೇಳೆ, ಜಾರ್ಜಿಯಾದಲ್ಲಿ ಮತ ಎಣಿಕೆಯಲ್ಲಿ ಅಕ್ರಮವಾಗಿದೆ. ಹೀಗಾಗಿ ಮರು ಮತಎಣಿಕೆಯಾಗಬೇಕು ಎಂದು ದಾವೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಬೆಳವಣಿಗೆ ಭಾರಿ ಕುತೂಹಲ ಕೆರಳಿಸಿತ್ತಲ್ಲದೆ, ಚುನಾವಣಾ ಸೋಲನ್ನು ಟ್ರಂಪ್ ಸುಲಭವಾಗಿ ಸ್ವೀಕರಿಸುವ ಮನಸ್ಥಿತಿಯಲ್ಲಿ ಇಲ್ಲ ಎಂಬ ಭಾವನೆಯನ್ನು ಮೂಡಿಸಿತ್ತು.

ಮಿಷಗನ್ ಕೋರ್ಟ್​ ನ ಕ್ಲೇಮ್ಸ್ ಜಡ್ಜ್ ಸಿಂಥಿಯಾ ಸ್ಟೀಫನ್ಸ್ ಪ್ರಕರಣದ ವಿಚಾರಣೆ ಆರಂಭಿಸಿದ್ದಲ್ಲದೆ, ಮಿಷಿಗನ್ ಸೆಕ್ರೆಟರಿ ಆಫ್​ ಸ್ಟೇಟ್​ ಸ್ಥಳೀಯ ಮತ ಎಣಿಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅದಕ್ಕೆ ಸಾಕ್ಷ್ಯವೂ ಇಲ್ಲ ಎಂದು ಸಾರಾಸಗಟಾಗಿ ದಾವೆಯನ್ನು ತಿರಸ್ಕರಿಸಿದರು. ಇಂದು ಅಧಿಕೃತ ಆದೇಶ ನೀಡುವ ಸಾಧ್ಯತೆ ಇದೆ.

ಇಲ್ಲಿ ಹಲವು ನ್ಯೂಸ್ ಚಾನೆಲ್​ಗಳು ಜೋ ಬಿಡೆನ್ ಇಲ್ಲಿ ವಿಜೇತರೆಂದು ಘೋಷಿಸಿವೆ. ಜಾರ್ಜಿಯಾದಲ್ಲಿ ಜಡ್ಜ್ ಜೇಮ್ಸ್ ಎಫ್ ಬಾಸ್ ಕೂಡ ದಾವೆಯನ್ನು ತಿರಸ್ಕರಿಸಿದ್ದು, ನಾನು ಈ ಮನವಿಯನ್ನು ನಿರಾಕರಿಸುತ್ತೇನೆ ಮತ್ತು ಪಿಟಿಷನ್​ ಅನ್ನು ವಜಾಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಟ್ರಂಪ್ ಪರವಾಗಿ ಪೆನ್ನಿಸಿಲ್ವೇನಿಯಾ ಮತ್ತು ನೆವಡಾದಲ್ಲೂ ದಾವೆಗಳು ಸಲ್ಲಿಕೆಯಾಗಿದ್ದು, ವಿಸ್ಕನ್​ಸಿನ್​ನಲ್ಲಿ ಮರು ಮತ ಎಣಿಕೆ ಆಗಬೇಕೆಂಬ ಆಗ್ರಹ ವ್ಯಕ್ತವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net