ಟ್ರಂಪ್‌ ಕುರಿತ ಪುಸ್ತಕ: ಬಿಡುಗಡೆಗೆ ಮುನ್ನವೇ ದಾಖಲೆಯ ಮಾರಾಟ

trump
Published on

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತಾಗಿ ಅವರ ಸಹೋರನ ಮಗಳು ಪುಸ್ತಕವೊಂದನ್ನು ಬರೆದಿದ್ದು, ಅದು ಬಿಡುಗಡೆಯಾಗುವ ಮುನ್ನವೇ ಒಂಬತ್ತೂವರೆ ಲಕ್ಷ ಪ್ರತಿಗಳು ಮಾರಾಟವಾಗಿವೆ!

ಈ ಕುರಿತು ಪುಸ್ತಕದ ಪ್ರಕಾಶಕರೇ ಮಾಹಿತಿ ನೀಡಿದ್ದಾರೆ. ಈ ಪುಸ್ತಕದ ಹೆಸರು 'ಟೂ ಮಚ್ ಆ್ಯಂಡ್‌ ನೆವರ್‌ ಇನಫ್‌: ಹೌ ಮೈ ಫ್ಯಾಮಿಲಿ ಕ್ರಿಯೇಟೆಡ್ ದಿ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್' (ಅತಿಯಾದ ಹಾಗೂ ಎಂದೂ ಮುಗಿಯದ: ಹೇಗೆ ನನ್ನ ಕುಟುಂಬ ವಿಶ್ವದ ಅತ್ಯಂತ ಭಯಾನಕ ಮನುಷ್ಯನನ್ನು ಸೃಷ್ಟಿಸಿದೆ).

ಡೊನಾಲ್ಡ್‌ ಟ್ರಂಪ್‌ ಅವರ ಅಣ್ಣ ಮೇರಿ ಟ್ರಂಪ್‌ ಅವರು ಬರೆದಿರುವ ಈ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ರನ್ನು ಅಹಂಕಾರಿ ಹಾಗೂ ಅಜ್ಞಾನಿ ಎಂಬುದಾಗಿ ಬಿಂಬಿಸಿದ್ದಾರೆ.

ಅಡ್ವಾನ್ಸ್‌ ಬುಕಿಂಗ್‌, ಆಡಿಯೊ ಮತ್ತು ಡಿಜಿಟಲ್ ರೂಪಗಳು ಸೇರಿದಂತೆ 9,50,000 ಪ್ರತಿಗಳು ಕಳೆದ ಮಂಗಳವಾರ ಮಾರಾಟವಾಗಿವೆ ಹಾಗೂ ಇದು ಪ್ರಕಾಶನ ಸಂಸ್ಥೆ ಸೈಮನ್ ಆಯಂಡ್ ಶಸ್ಟರ್ ನ ದಾಖಲೆಯಾಗಿದೆ ಎಂದು ಪ್ರಕಾಶನ ಸಂಸ್ಥೆ ಹೇಳಿದೆ.

ಇನ್ನೂ ಹೆಚ್ಚಿನ ಪ್ರತಿಗಳಿಗೆ ಬೇಡಿಕೆ ಬಂದಿದೆ. ಅಮೆರಿಕದ ಮಾರುಕಟ್ಟೆಯೊಂದಕ್ಕೇ 11.5 ಲಕ್ಷ ಪ್ರತಿಗಳನ್ನು ಪ್ರಕಾಶಕರು ತೆಗೆದಿರಿಸಿದ್ದಾರೆ. ಆನ್‌ಲೈನ್‌ ಮಾರಾಟ ಕಂಪೆನಿ ಅಮೇಜಾನ್‌ ಕೆನಡಾ ಮತ್ತು ಆಸ್ಟ್ರೇಲಿಯಗಳ ಮಾರಾಟ ಪಟ್ಟಿಯಲ್ಲಿಯೂ ಪುಸ್ತಕವು ಮೊದಲ ಸ್ಥಾನದಲ್ಲಿದೆ.

ಈ ಮಧ್ಯೆಯೇ, ಈ ಪುಸ್ತಕವು ಸುಳ್ಳುಗಳ ಸರಮಾಲೆ ಎಂಬುದಾಗಿ ಶ್ವೇತಭವನ ಪುಸ್ತಕವನ್ನು ಟೀಕಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net