

Trump And Modi Relationship : ಭಾರತ ಮತ್ತು ಅಮೆರಿಕ ನಡುವೆ ಪ್ರಸ್ತುತ ಉದ್ವಿಗ್ನ ವಾತಾವರಣವಿದೆ. ಉಭಯ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದೆ. ಇದಕ್ಕೆ ಕಾರಣ ಟ್ರಂಪ್, ಭಾರತದ ಮೇಲೆ ಹೇರಿರುವ ಅತ್ಯಧಿಕ ಸುಂಕ. ರಷ್ಯಾದ ಜತೆ ತೈಲ ಖರೀದಿ ಮಾಡುತ್ತಿರುವುದಕ್ಕೆ ದಂಡನೆಯಾಗಿ ಸುಂಕ ಹೇರಿದ್ದಾರೆ. ಹೀಗಾಗಿ ಟ್ರಂಪ್ ನಡೆಯ ಮೇಲೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಉತ್ತಮ ಬಾಂಧವ್ಯ ಇದೀಗ ಕಣ್ಮರೆಯಾಗಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ. ಅಲ್ಲದೆ, ಅಮೆರಿಕನ್ ನಾಯಕನ ಜೊತೆಗಿನ ನಿಕಟ ಸಂಬಂಧಗಳು ಕೆಟ್ಟ ದಿನಗಳಿಂದ ರಕ್ಷಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಜಾನ್ ಬೋಲ್ಟನ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಅಧ್ಯಕ್ಷ ಟ್ರಂಪ್ ಅವರು ಭಾರತದ ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಆದರೆ, ಈಗ ಆ ರೀತಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಭಾರತ ತೆಗೆದುಕೊಂಡ ಕೆಲವು ಕ್ರಮಗಳು ಇದಕ್ಕೆ ಕಾರಣವಾಗಿರಬಹುದು. ಶ್ವೇತಭವನವು ಅಮೆರಿಕ ಮತ್ತು ಭಾರತ ಸಂಬಂಧಗಳನ್ನು ದಶಕಗಳ ಹಿಂದಕ್ಕೆ ತಳ್ಳಿದೆ. ಈ ಒಂದು ನಡೆ, ಮೋದಿಯನ್ನು ರಷ್ಯಾ ಮತ್ತು ಚೀನಾದ ಹತ್ತಿರ ತಂದಿದೆ. ಸದ್ಯ ಚೀನಾ, ಅಮೆರಿಕ ಮತ್ತು ಟ್ರಂಪ್‌ಗೆ ಪರ್ಯಾಯವಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಂಡಿದೆ. ಹೀಗಾಗಿ, ಭಾರತ ಮತ್ತು ಚೀನಾ ನಡುವೆ ಉತ್ತಮ ಸಂಬಂಧ ಬೆಳೆಯುವಂತಾಗಿದೆ ಎಂದಿದ್ದಾರೆ.
ಆದಾಗ್ಯೂ, ಟ್ರಂಪ್ ಅವರು ತಮ್ಮ ಅಂತಾರಾಷ್ಟ್ರೀಯ ಸಂಬಂಧಗಳನ್ನು ಆಯಾ ನಾಯಕರೊಂದಿಗಿನ ವೈಯಕ್ತಿಕ ಸಂಬಂಧಗಳ ದೃಷ್ಟಿಯಿಂದ ನೋಡುತ್ತಾರೆ. ಅವರು ಪುಟಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ, ಅಮೆರಿಕ ಮತ್ತು ರಷ್ಯಾ ನಡುವಿನ ಸಂಬಂಧವೂ ಅದೇ ರೀತಿ ಇರುತ್ತಿತ್ತು. ಆದರೆ, ವಾಸ್ತವದಲ್ಲಿ, ಇದು ಅಸಾಧ್ಯ. ಇದು ಎಲ್ಲರಿಗೂ ಒಂದು ಪಾಠ. ಉತ್ತಮ ಸಂಬಂಧಗಳು ಕೆಲವೊಮ್ಮೆ ಸಹಾಯ ಮಾಡಬಹುದು ಆದರೆ, ಅವು ಯಾವಾಗಲೂ ಉಳಿಯುವುದಿಲ್ಲ. ಇದೀಗ, ಟ್ರಂಪ್ ಭಾರತದ ಮೇಲೆ ತುಂಬಾ ಕಠಿಣವಾಗಿರಲು ಬಯಸುತ್ತಾರೆ ಎಂದು ಬೋಲ್ಟನ್ ಅವರು ತೀಕ್ಷ್ಣವಾದ ಕಾಮೆಂಟ್ ಮಾಡಿದರು. ಅಂದಹಾಗೆ, ಯುಎಸ್ ಮತ್ತು ಭಾರತದ ನಡುವಿನ ಸುಂಕ ವಿವಾದದ ಸಂದರ್ಭದಲ್ಲಿ ಬೋಲ್ಟನ್ ಅವರು ನೀಡಿರುವ ಹೇಳಿಕೆಗಳು ಭಾರಿ ಮಹತ್ವವನ್ನು ಪಡೆದುಕೊಂಡಿವೆ.
ಟ್ರಂಪ್ ಅವರು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಾನ್ ಬೋಲ್ಟನ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಆದಾಗ್ಯೂ, ಟ್ರಂಪ್ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಬಗ್ಗೆ ಭಿನ್ನಾಭಿಪ್ರಾಯಗಳ ನಡುವೆ ಅವರು ರಾಜೀನಾಮೆ ನೀಡಿದರು. ವರ್ಗೀಕೃತ ದಾಖಲೆಗಳ ದುರುಪಯೋಗದ ಆರೋಪದ ತನಿಖೆಯ ಭಾಗವಾಗಿ ಎಫ್‌ಬಿಐ ಇತ್ತೀಚೆಗೆ ಬೋಲ್ಟನ್ ಅವರ ಮನೆ ಮತ್ತು ವಾಷಿಂಗ್ಟನ್ ಕಚೇರಿಯ ಮೇಲೆ ದಾಳಿ ನಡೆಸಿತು. (ಏಜೆನ್ಸೀಸ್)