

ನ್ಯೂಯಾರ್ಕ್ : ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (77) ಅವರಿಗೆ 2024ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ದೊಡ್ಡ ಅಘಾತ ಎದುರಾಗಿದೆ. ಹಶ್ ಮನಿ ಕ್ರಿಮಿನಲ್ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ನ್ಯೂಯಾರ್ಕ್ನ ಮ್ಯಾನಹಟನ್ ನ್ಯಾಯಾಲಯಾದ 12 ತೀರ್ಪುಗಾರರಿದ್ದ ಸಮಿತಿಯು ಒಮ್ಮತದಿಂದ ಈ ತೀರ್ಪನ್ನು ನೀಡಿದೆ. ಎರಡು ದಿನಗಳ ಕಾಲ ಚರ್ಚಿಸಿದ ನಂತರ ಎಲ್ಲಾ 34 ಪ್ರಕರಣಗಳಲ್ಲಿ ಡೊನಾಲ್ಡ್ ಟ್ರಂಪ್ ತಪ್ಪಿತಸ್ಥರೆಂದು ತೀರ್ಪುಗಾರರು ಘೋಷಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ಸಮಾವೇಶಕ್ಕೂ ಮೊದಲು ಅಂದರೆ ಜುಲೈ 11 ರಂದು ಈ ಪ್ರಕರಣದಲ್ಲಿ ಟ್ರಂಪ್ ಅವರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಡೊನಾಲ್ಡ್ ಟ್ರಂಪ್‌ಗೆ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎನ್ನಲಾಗಿದೆ. ಆದರೆ ಟ್ರಂಪ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2016ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರು ಟ್ರಂಪ್ ಜತೆಗೆ ಲೈಂಗಿಕ ಸಂಬಂಧ ಹೊಂದಿದೆ ಎಂದು ಹೇಳಿದ್ದರು. ಆ ವೇಳೆ ಸ್ಟಾರ್ಮಿ ಡೇನಿಯಲ್ಸ್ ಅವರನ್ನು ಮೌನವಾಗಿಸಲು ಹಣ ನೀಡಿದ್ದು, ಆ ವ್ಯವಹಾರದ ದಾಖಲೆಗಳನ್ನು ಸುಳ್ಳು ಮಾಡಿರುವ ಆರೋಪ ಟ್ರಂಪ್ ಮೇಲಿದೆ.
ಈ ತೀರ್ಪಿನಿಂದಾಗಿ ಅಮೆರಿಕಾದ ಇತಿಹಾಸದಲ್ಲೇ ಅಪರಾಧಕ್ಕೆ ಶಿಕ್ಷೆಗೊಳಗಾದ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಡೊನಾಲ್ಡ್ ಟ್ರಂಪ್ ಗುರಿಯಾಗಿದ್ದಾರೆ.
ಟ್ರಂಪ್ ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ನ್ಯಾಯಾಲಯದ ಹೊರಗೆ ಮಾತನಾಡಿದ ಟ್ರಂಪ್, "ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ನಿರಪರಾಧಿ. ಕೊನೆಯವರೆಗೂ ಹೋರಾಡಿ ಗೆಲ್ಲುತ್ತೇವೆ. ನವೆಂಬರ್ 5ರಂದು ನಿಜವಾದ ನಿರ್ಧಾರ ಬರಲಿದೆ" ಎಂದಿದ್ದಾರೆ.
ಇನ್ನೂ ತೀರ್ಪಿನ ಬಗ್ಗೆ ಜೋ ಬಿಡೆನ್ ಯಾರೂ ಕಾನೂನಿಗಿಂತ ಮೇಲಲ್ಲ ಎಂಬುದನ್ನು ನ್ಯಾಯಾಲಯದ ತೀರ್ಪು ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ.