ನಿಜಕ್ಕೂ ದುರದೃಷ್ಟವಂತೆ!: ‘ಜನನಾಯಗನ್’ ಚಿತ್ರದ ಪಾತ್ರಕ್ಕೆ ಕತ್ತರಿ, ನಟಿ ಆನಂದಿ ಕಣ್ಣೀರು

ಆನಂದಿ ಅಜಯ್ ಕಣ್ಣೀರು
ಆನಂದಿ ಅಜಯ್ ಕಣ್ಣೀರು
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ಸಿಎಂ ಅಭಿನಯದ ಕೊನೆಯ ಸಿನಿಮಾ ಜನನಾಯಗನ್​
  • ಆನಂದಿ ಅಜಯ್ ಪಾತ್ರದ ದೃಶ್ಯಗಳಿಗೆ ಕತ್ತರಿ
  • ಐತಿಹಾಸಿಕ ಸಿನಿಮಾದಲ್ಲಿ ತಾನೇ ಇರದ್ದಕ್ಕೆ ಕಣ್ಣೀರು ಹಾಕಿದ ನಟಿ
ತಮಿಳು ನಾಡು ಸಿಎಂ, ನಟ ಜೋಸೆಫ್​ ವಿಜಯ್ ಅಭಿನಯದ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ‘ಜನನಾಯಗನ್’ ಮತ್ತು ಅವರ ಅಭಿಮಾನಿಗಳ ನಡುವೆ ಭಾವನಾತ್ಮಕ ಸಂಬಂಧ ಹೊಂದಿತ್ತು. ಇನ್ನು ಈ ಚಿತ್ರದಲ್ಲಿ ನಟಿಸಿರುವ ಬಗ್ಗೆ ಹಲವು ಕಲಾವಿದರು ಹರ್ಷ ವ್ಯಕ್ತಪಡಿಸಿದ್ದರು. ಆದರೆ, ನಟಿ ಆನಂದಿ ಅಜಯ್ ಪಾಲಿಗೆ ಆ ಅದೃಷ್ಟ ಇಲ್ಲವಾಗಿದೆ. ಯಾಕೆಂದರೆ, ‘ಜನನಾಯಗನ್’ನಲ್ಲಿ ಅವರು ನಟಿಸಿದ್ದರೂ, ಇದೀಗ ರಿಲೀಸ್ ಆದ ಸಿನಿಮಾದಲ್ಲಿ ತಮ್ಮನ್ನು ತಾವು ಹುಡುಕುವಂತಾಗಿದ್ದು, ನಟಿಯ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ. ಮೊದಲ ಬಾರಿಗೆ ವಿಜಯ್ ಜತೆ ತೆರೆ ಹಂಚಿಕೊಂಡಿರುವುದನ್ನು ನೋಡಲು ವರ್ಷದಿಂದ ಕಾದಿದ್ದ ನಟಿಗೆ ಇದೀಗ ನಿರಾಸೆಯಾಗಿದೆ. ಆ ನೋವಿನಲ್ಲೇ ಅವರು, ‘ಈ ಹಿಂದೆ ನಾನು ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅಲ್ಲಿ ನನ್ನ ಪಾತ್ರಕ್ಕೆ ಕತ್ತರಿ ಹಾಕಿದ್ದರೂ ನಾನು ಬೇಸರಗೊಂಡಿರಲಿಲ್ಲ. ಆದರೆ, ‘ಜನನಾಯಗನ್’ನಲ್ಲಿ ನನ್ನ ಪಾತ್ರ ಇಲ್ಲದಿರುವುದು ನನಗೆ ತುಂಬಾ ನೋವುಂಟು ಮಾಡಿದೆ. ಮೊದಲ ಬಾರಿಗೆ ಸಹಿ ಮಾಡಿದ ಚಿತ್ರ ಇದಾಗಿದ್ದು, ಅದಕ್ಕಾಗಿ ಒಂದೂವರೆ ವರ್ಷದಿಂದ ಕಾಯುತ್ತಿದ್ದೆ. ಹಾಗೆಯೇ, ವಿಜಯ್ ಸರ್ ಜತೆಗೆ ಕೆಲವು ದೃಶ್ಯಗಳಿದ್ದವು. ಅದನ್ನೂ ತೆಗೆಯಲಾಗಿದೆ. ವಿಜಯ್ ಸರ್ ಜತೆಗೆ ಕೆಲಸ ಮಾಡಬೇಕು ಎಂಬ ಕನಸು ಹೊತ್ತೇ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದೆ. ಮೊದಲ ದಿನವೇ ಸಿನಿಮಾ ನೋಡಲು ಹೋದವಳಿಗೆ ನಿರಾಸೆಯಾಗಿದ್ದು, ನನ್ನ ಪಾತ್ರವನ್ನು ಕತ್ತರಿಸಲಾಗಿದೆ. ನಿಜಕ್ಕೂ ನಾನು ದುರದೃಷ್ಟವಂತೆ’ ಎಂದು ಜಾಲತಾಣದಲ್ಲಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನಟಿಗೆ ಅಭಿಮಾನಿಗಳು ಸಮಾಧಾನ ಹೇಳಿದ್ದಾರೆ. ತಮಿಳು ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ಆನಂದಿ ಅಜಯ್ ಈ ಹಿಂದೆ ‘ಕರುಪ್ಪು’, ‘ಗಟ್ಟಾ ಕುಸ್ತಿ 2’ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು.-ಏಜೆನ್ಸೀಸ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net