ಶಿಷ್ಯನನ್ನೂ ಭವಸಾಗರ ದಾಟಿಸುವವನೇ ನಿಜವಾದ ಗುರು

ವಿಜಯವಾಣಿ
Published on

ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಬಳಿ ಸಾರುವವರಿಗೆ ಒಂದು ಕಿವಿಮಾತು ಹೇಳುತ್ತಿದ್ದರು. ಅದೇನೆಂದರೆ ‘ನನ್ನನ್ನು ಪರಿಪೂರ್ಣವಾಗಿ ಪರೀಕ್ಷಿಸಿರಿ, ಹೇಗೆ ನಾಣ್ಯವನ್ನು ಬದಲಿಸುವ ಮುನ್ನ ಪ್ರತಿಯೊಂದು ನಾಣ್ಯವನ್ನು ಪರೀಕ್ಷಿಸಿ ಸ್ವೀಕರಿಸುತ್ತೀರೋ, ಅದೇ ರೀತಿ’ ಎನ್ನುತ್ತಿದ್ದರು. ಈ ಉಪದೇಶ ಇಲ್ಲಿಗೇ ನಿಲ್ಲುತ್ತಿರಲಿಲ್ಲ, ಬದಲಾಗಿ ನೀವು ಗುರು ಎಂದು ಸ್ವೀಕರಿಸುವ ಮುನ್ನ ಆತನನ್ನು ಹಗಲೂ ರಾತ್ರಿ ಎನ್ನದೆ ವೀಕ್ಷಿಸಬೇಕು, ಪರೀಕ್ಷಿಸಬೇಕು ಎಂದು ತಾಕೀತು ಮಾಡುತ್ತಿದ್ದರು.

ಒಂದು ಬಾರಿ ಕಬೀರದಾಸರಲ್ಲಿ, ಭಗವಂತ ಹಾಗೂ ಗುರು ಇಬ್ಬರೂ ಪ್ರತ್ಯಕ್ಷರಾದಲ್ಲಿ ಯಾರಿಗೆ ಮೊದಲ ನಮನ ಎಂದು ಕೇಳುತ್ತಾರೆ. ತಕ್ಷಣದ ಉತ್ತರ ಶ್ರೀಗುರುವಿಗೆ ಎಂದರಂತೆ ಕಬೀರರು. ಕಾರಣ, ಭಗವದ್ ಶಕ್ತಿಯೊಂದಿದೆ ಎಂಬುದರ ಅರಿವನ್ನು ಮೂಡಿಸಿರುವವನೇ ಗುರುವರ್ಯ ಎಂದರಂತೆ. ರಾಮಕೃಷ್ಣರ ಪ್ರಕಾರ ಜೀವನದಲ್ಲಿ ಗುರು ಬೇಕೇ ಬೇಕು. ಆದರೆ ಯಾವ ರೀತಿಯ ಗುರು ಎಂಬುದು ಯಕ್ಷ ಪ್ರಶ್ನೆ. ಉತ್ತರ- ಸಚ್ಚಿದಾನಂದನೇ ಗುರು. ಈ ರೀತಿಯಲ್ಲಿ ಭೋಧಿಸಿದವರು ರಾಮಕೃಷ್ಣ ಪರಮಹಂಸರು.

ಭಕ್ತ: ಗುರುವಿನ ಉಪದೇಶ ಸಂಬಂಧ ತಿಳಿಸಿದಿರಲ್ಲ, ಆತನನ್ನು ನಾವು ಪಡೆದುಕೊಳ್ಳುವ ಬಗೆ ಹೇಗೆ?

ರಾಮಕೃಷ್ಣರು: ಸಿಕ್ಕ ಸಿಕ್ಕವರೆಲ್ಲಾ ಗುರು ಆಗಲಾರರು. ಮರದ ದಿಮ್ಮಿ ನೀರಿನಲ್ಲಿ ತೇಲಿ ಹೋಗಬಲ್ಲದು, ಅನೇಕ ಜೀವಿಗಳನ್ನು, ಜಂತುಗಳನ್ನು ಹೊತ್ತುಕೊಂಡು ಹೋಗಬಲ್ಲದು. ಆದರೆ ಬೆಂಡಿನ ಮೇಲೆ ಹತ್ತಿ ಕುಳಿತರೆ, ಬೆಂಡೂ ಮುಳುಗಿಹೋಗುತ್ತದೆ, ಹತ್ತಿದವನೂ ಮುಳುಗಿ ಹೋಗುತ್ತಾನೆ. ಸಚ್ಚಿದಾನಂದನೇ ಗುರು. ಹೀಗೆ ರಾಮಕೃಷ್ಣರ ಸಾಧನಾ ಪರ್ವವನ್ನು ಎಳೆ ಎಳೆಯಾಗಿ ಅರಿಯಲು ಪ್ರಯತ್ನಿಸಿದಾಗ ನಮಗೆ ಅರಿವಾಗುವುದು ಆ ಮಹಾನ್ ಗುರುವಿನ ಶಕ್ತಿ ಮತ್ತು ಹೃದಯ ವೈಶಾಲ್ಯತೆ. ನಿಜವಾದ ಅರ್ಥದಲ್ಲಿ ಶಿಷ್ಯನ ಕೈಹಿಡಿದು ಮುಕ್ತಿಯ ಪಥದೆಡೆಗೆ ಕರೆದೊಯ್ಯುವವನೇ ಆದಿ ಗುರು ಎಂದೆನಿಸಿಕೊಳ್ಳುತ್ತಾನೆ. ಕಠೋಪನಿಷತ್​ನಲ್ಲಿ ಒಂದು ವಿಚಾರವಿದೆ. ಅದೇನೆಂದರೆ ಪರಿಪಕ್ವವಾದ ಪರಮಗುರು ಹೇಗೆ ತನ್ನ ಬಳಿ ಸಾರಿದ ಶಿಷ್ಯನಿಗೆ ಗುರಿಯನ್ನು ಮುಟ್ಟಿಸುತ್ತಾನೆ ಎಂಬುದು. ತಾನು ಆತ್ಮ ತತ್ತ್ವವನ್ನು, ಬ್ರಹ್ಮಭಾವವನ್ನು ಪಡೆದ ನಂತರವೇ ಮತ್ತೊಬ್ಬರಿಗೆ ಮುಕ್ತಿಯ ಪಥವನ್ನು ತೋರಿಸಲು ಅರ್ಹನೆಂಬ ಅಂಶವನ್ನು ಈ ಶ್ಲೋಕದಲ್ಲಿ ತಿಳಿಸಲಾಗಿದೆ.

ನ ನರೇಣಾವರೇಣ ಪೋ›ಕ್ತ ಏಷ ಸುವಿಜ್ಞೇಯೋ ಬಹುಧಾಚಿಂತ್ಯಮಾನಃ | ಅನನ್ಯಪೋ›ಕ್ತೇಗತಿರತ್ರ ನಾಸ್ತಿ ಅಣೀಯಾನ್ ಹೃತರ್ಕ್ಯಮಣುಪ್ರಮಾಣಾತ್ || ಕಠ 1.3.8

ಆತ್ಮದ ಸಖ್ಯತೆಯ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಈ ಆತ್ಮವು ಸೂಕ್ಷ್ಮಾತಿಸೂಕ್ಷ್ಮ ಮತ್ತು ತರ್ಕಕ್ಕೆ ಮೀರಿದ್ದ ಬ್ರಹ್ಮಭಾವವನ್ನು ಪಡೆದ ಗುರುವಿನಿಂದ ಉಪದೇಶಿಸಲ್ಪಟ್ಟರೆ ಆಗ ಗುರಿಯನ್ನು ಮುಟ್ಟಬಹುದು. ಇದು ಉಪನಿಷತ್ ವಾಕ್ಯಗಳಾದರೆ ಭಗವದ್ಗೀತೆಯಲ್ಲಿ ಮತ್ತೂ ಅದ್ಭುತವಾದ ರೀತಿಯಲ್ಲಿ ಗುರು ಬಗ್ಗೆ ವಿವರಣೆ ನೀಡಲಾಗಿದೆ. ನಿಜವಾಗಿ (ಜಗದ್ಗುರು ಎಂದರೆ ಮತ್ತೊಂದು) ನಿಜವಾದ ಗುರು ಎಂದರೆ ಅಂತರ್ಯಾಮಿಯಾದ ಭಗವಂತ ಎಂದರ್ಥ. ಅವನೇ ಎಲ್ಲರ ಗತಿ, ಆಧಾರ, ಪ್ರಭು, ಸಾಕ್ಷಿ, ಆಶ್ರಯ ಸ್ಥಾನ, ಬಂಧು, ಸೃಷ್ಟಿ, ಲಯ ಸ್ಥಾನ. ಎಲ್ಲದರ ಮೂಲ ಮತ್ತು ಅವ್ಯಯವಾದ ಬೀಜ (ಗೀತೆ 9.18) ಗುರುವಿನ ಶಕ್ತಿ, ಮಹಿಮೆ ಎಷ್ಟಿರುತ್ತದೆ ಎಂದರೆ ಇದಕ್ಕೆ ಮಹಾನ್ ಉದಾಹರಣೆ ಭಗವಾನ್ ರಾಮಕೃಷ್ಣರೇ ಎನ್ನಬಹುದು.

ಸ್ವಾಮಿ ಶಿವಾನಂದಜೀ ಮಹಾರಾಜ್ ರಾಮಕೃಷ್ಣ ಪರಮಹಂಸರ ಪ್ರತ್ಯಕ್ಷ ಶಿಷ್ಯ. ಅವರ ಅನುಭವದ ಪ್ರಕಾರ ಕೇವಲ ಇಚ್ಛೆ ಅಥವಾ ನೋಟದಿಂದ ಇತರರಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಸಂಚಾಲಿಸಿ ಅವರ ಮನಸ್ಸನ್ನು ಉನ್ನತ ಪ್ರಜ್ಞೆಗೆ ಏರಿಸುವ ಅಪೂರ್ವ ಶಕ್ತಿಯನ್ನು ರಾಮಕೃಷ್ಣರು ಹೊಂದಿದ್ದರು. ಗುರು ಸ್ತುತಿಯಲ್ಲಿ ತಿಳಿಸಿರುವಂತೆ ಅಜ್ಞಾನದ ಪೊರೆಯಿಂದ ಕುರುಡನಾದವನ ಕಣ್ಣುಗಳನ್ನು ಜ್ಞಾನಾಂಜನವನ್ನು ಹಚ್ಚಿ ತೆರೆಯುವಂತೆ ಮಾಡುವ ದಿವ್ಯ ಗುರುವನ್ನು ನಮಿಸುತ್ತೇನೆ. ಶಿಷ್ಯನಿಗೆ ಆತ್ಮಜ್ಞಾನವನ್ನಿತ್ತು ಅವನ ಅನೇಕ ಜನ್ಮಗಳ ಕರ್ಮಬಂಧವನ್ನು ದಹಿಸಿ ಹಾಕುವ ಗುರುವಿಗೆ ನಾನು ವಂದಿಸುತ್ತೇನೆ. ಹೀಗೆ ನಾನಾ ರೀತಿಯಲ್ಲಿ ಗುರು ಸ್ಮರಣೆ, ಗುರು ಸ್ತುತಿಗಳನ್ನು ನಿರಂತರವಾಗಿ ನಡೆಸಿದ್ದಲ್ಲಿ ಖಂಡಿತಾ ನಿಜವಾದ ಗುರು ದೊರೆಯುತ್ತಾನೆ.

ಗುರು ಎಂದರೆ ತಾನು ಮಾತ್ರ ಈ ಭವಸಾಗರವನ್ನು ದಾಟುವುದಲ್ಲ, ತನ್ನನ್ನು ನಂಬಿ ಬಂದ ಶಿಷ್ಯರಿಗೂ ದಾಟಿಸುವ ಶಕ್ತಿಯನ್ನು ಹೊಂದಿರುವವನು. ಶ್ರೀ ಶಂಕರ ಭಗವತ್ಪಾದಾಚಾರ್ಯರು, ಭಯಂಕರವಾದ ಸಂಸಾರ ಸಾಗರವನ್ನು ತಾವೂ ದಾಟಿ ಯಾವುದೊಂದು ಕಾರಣವನ್ನೂ ಬಯಸದೆ ಇತರರನ್ನೂ ದಾಟಿಸುವ ಶಾಂತರೂ ಮಹಾಂತರು ಆದ ಸತ್ಪುರುಷರು ವಸಂತ ಋತುವಿನಂತೆ ಲೋಕ ಹಿತವನ್ನೇ ಮಾಡುತ್ತಾ ಇರುತ್ತಾರೆ (ವಿವೇಕ ಚೂಡಾಮಣಿ 37) ಎಂದಿದ್ದಾರೆ.ಇದಕ್ಕೆ ಸರಿಯಾದ ಉದಾಹರಣೆಯೆಂದರೆ ರಾಮಕೃಷ್ಣ ಪರಮಹಂಸರು. ಈ ಕಾರಣದಿಂದಲೇ ಪರಮಗುರು ಸಿದ್ಧಯೋಗಿ ಎಂದು ಭಕ್ತರಿಂದ ಕರೆಯಲ್ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net