

ಬೈಲಕುಪ್ಪೆ: ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ರಾಸುಗಳಿಗೆ ಕ್ರಾಸ್ ಇಂಜೆಕ್ಷನ್ ಕೊಡಿಸಲು ನೇಮಿಸಲಾಗಿರುವ ನೌಕರ ಸಮಯಕ್ಕೆ ಸರಿಯಾಗಿ ಬಾರದೆ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೈಲಕುಪ್ಪೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 75ಕ್ಕೂ ಹೆಚ್ಚು ಮಹಿಳಾ ಸದಸ್ಯರು ಪ್ರತಿದಿನ 300 ಲೀ.ಗೂ ಹೆಚ್ಚು ಹಾಲನ್ನು ಸಂಘಕ್ಕೆ ಸರಬರಾಜು ಮಾಡುತ್ತಿದ್ದಾರೆ. ಮೈಸೂರು ಹಾಲು ಒಕ್ಕೂಟದ ವತಿಯಿಂದ ರೈತರು ಸಾಕುವ ಜಾನುವಾರುಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪಶು ಚಿಕಿತ್ಸೆ ಹಾಗೂ ಜಾನುವಾರುಗಳಿಗೆ ಕ್ರಾಸ್ ನೀಡುವ ಸೌಲಭ್ಯವನ್ನೂ ಕಲ್ಪಿಸಿದೆ. ಆದರೆ ಬೈಲಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಜಾನುವಾರುಗಳಿಗೆ ಕ್ರಾಸ್ ಕೊಡಿಸಲು ನೇಮಕವಾಗಿರುವ ಹೇಮಂತ್ ಎಂಬಾತ ರೈತರ ಕರೆಗಳಿಗೆ ಸ್ಪಂದಿಸುತ್ತಿಲ್ಲ. ರಾಸುಗಳನ್ನು ನೋಡಲು ಸಹ ಬರುವುದಿಲ್ಲ. ಇದೇ ವಿಚಾರವನ್ನು ಸಂಘದ ಸಭೆಯಲ್ಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಹಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನಾದರೂ ಮೇಲಧಿಕಾರಿಗಳು ಆತನನ್ನು ಬದಲಾಯಿಸಿ ಕೊಡಬೇಕೆಂದು ಬೈಲಕುಪ್ಪೆ ಶಿವು ಒತ್ತಾಯಿಸಿದ್ದಾರೆ.