

ನವದೆಹಲಿ: ತ್ರಿಪುರಾದ ಖೋವಾಯ್ ಎಂಬ ಜಿಲ್ಲೆಯಲ್ಲಿ ದುಷ್ಕರ್ಮಿಗಳು 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೂವರು ರೇಪಿಸ್ಟ್ಗಳು ಸೇರಿ, ಇವರಿಗೆ ಆಶ್ರಯ ನೀಡಿದ ಆರೋಪದಲ್ಲಿ ಇನ್ನು ಏಳು ಮಂದಿ ಸೇರಿ ಒಟ್ಟು 10 ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತ್ರಿಪುರಾದ ಖಾಸಿಯಾಮಂಗಲ್ ಎಂಬ ಅರಣ್ಯ ಪ್ರದೇಶದಲ್ಲಿ ಜು.21ರಂದು ಈ ಪ್ರಕರಣ ನಡೆದಿದ್ದು, ಇನ್ನೂ ಇಬ್ಬರು ರೇಪಿಸ್ಟ್ಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಕರಣ ನಡೆದ ದಿನವೇ ದೂರು ದಾಖಲಾಗಿತ್ತು. ಆದರೆ, ಆರೋಪಿಗಳು ತಲೆಮರೆಸಿಕೊಂಡಿದ್ದರಿಂದ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕೊನೆಗೆ ಸಿಪಾಯಿಜಾಲಾ ಜಿಲ್ಲೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಯಿತು ಎಂದು ತ್ರಿಪುರಾ ಪೊಲೀಸ್ನ ಡಿಐಜಿ ತಿಳಿಸಿದ್ದಾರೆ.
ಭಾರಿ ಖಂಡನೆ: ಘಟನೆಯನ್ನು ಖಂಡಿಸಿ ತ್ರಿಪುರಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ತಪ್ಪಿತಸ್ಥರನ್ನು ಬಂಧಿಸಿ, ತ್ವರಿತ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ವಿವಿಯ ವಿದ್ಯಾರ್ಥಿನಿ ಅಸ್ಮಿರಾ ದೇವ್ ವರ್ಮಾ ಎಂಬುವರು Stand Against Rape ಎಂಬ ಗ್ರೂಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದು, ಈ ಗ್ರೂಪ್ನ ಭಾಗವಾಗುವ ಮೂಲಕ ಅತ್ಯಾಚಾರ ಪ್ರಕರಣಗಳ ವಿರುದ್ಧ ಧ್ವನಿಎತ್ತಲು ಮುಂದಾಗುವಂತೆ ಮನವಿ ಮಾಡಿಕೊಂಡಿದ್ದಾರೆ.