ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

20240112_124424
Published on

ಮೂಗೂರು: ಜ.25 ರಿಂದ 29ರವರೆಗೆ ನಡೆಯಲಿರುವ ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಎಲ್ಲ ರೀತಿಯ ಮೂಲಸೌಲಭ್ಯ ಕಲ್ಪಿಸಲು ಸಿದ್ಧತೆ ಕೈಗೊಳ್ಳುವಂತೆ ತಹಸೀಲ್ದಾರ್ ಸುರೇಶಾಚಾರ್ಯ ಅಧಿಕಾರಿಗಳಿಗೆ ಸೂಚಿಸಿದರು.

ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಕ್ತರಿಗೆ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಗೃಹ ಹಾಗೂ ನಿರಂತರ ವಿದ್ಯುತ್ ವ್ಯವಸ್ಥೆ ಮಾಡಬೇಕು. ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ರಾತ್ರಿ ವೇಳೆ ವಾಸ್ತವ್ಯ ಹೂಡುವ ಜತೆಗೆ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಧಾರ್ಮಿಕ ಆಚರಣೆಗೆ ಧಕ್ಕೆಯಾಗದಂತೆ ಗ್ರಾಮಸ್ಥರು ಸಹ ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದರು.

ಇದಕ್ಕೂ ಮುನ್ನ ಗ್ರಾಮಸ್ಥರು ಮಾತನಾಡಿ, ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಲ್ಯಾಣಿ ಉಪಯೋಗಕ್ಕೆ ಬಾರದೆ ಕಳೆದ 2 ವರ್ಷಗಳಿಂದ ತೆಪ್ಪೋತ್ಸವ ಸ್ಥಗಿತಗೊಂಡಿದೆ. ಶ್ರೀ ದೇಶೇಶ್ಶರ ಗೋಪುರದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಹೊಸ ರಥ ನಿರ್ಮಾಣದ ಬಾಕಿ ಹಣ ಬಿಡುಗಡೆಗೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ದೇಗುಲದ ಬಳಿಯ ಹೈಮಾಸ್ಟ್ ದೀಪ ಹಾಗೂ ಹೊಸಹಳ್ಳಿ ಗ್ರಾಮದ ರಸ್ತೆಯನ್ನು ದುರಸ್ತಿ ಮಾಡುವಂತೆ ತಹಸೀಲ್ದಾರ್ ಬಳಿ ಆಗ್ರಹಿಸಿದರು.

ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ, ತಾಪಂ ಮಾಜಿ ಸದಸ್ಯ ಎಂ.ಚಂದ್ರಶೇಖರ್, ಉಪ ತಹಸೀಲ್ದಾರ್ ಲಕ್ಷ್ಮೀ, ಎಂ.ಪಿ.ನಾಗರಾಜು, ಪಿಡಿಒ ಪ್ರಕಾಶ್, ಸೆಸ್ಕ್ ಎಇಇ ಧನಂಜಯ್, ಪಿಡಬ್ಲುೃಡಿ ಎಇಇ ಸತೀಶ್ ಚಂದ್ರನ್, ಉಪವಿಭಾಗಾಧಿಕಾರಿ ಚರೀತಾ, ಡಾ.ನಾಗರಾಜು, ಪಾರುಪತ್ಯದಾರ ಎಂ.ಬಿ.ಸಾಗರ್, ಎಂ.ಬಿ.ಮಹೇಂದ್ರ ಕುಮಾರ್, ಎಎಸ್‌ಐ ಮಲ್ಲೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಚಂದ್ರಮ್ಮ, ಗ್ರಾಮಸ್ಥರಾದ ಎಂ.ಕೆ.ಸಿದ್ದರಾಜು, ಎಂ.ಆರ್.ಸುಂದರ್, ಎಂ.ಪಿ.ಮರಿಸ್ವಾಮಿ, ಎಂ.ಎಂ.ಜಯಣ್ಣ , ಎಂ.ಎಂ.ಜಗದೀಶ್, ಕುಮಾರಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net