ಗಣಪನಲ್ಲಿ ಅಪ್ಪು ಕಂಡೆ!; ಗಣೇಶ್ ಜತೆಗಿನ ಬಾಂಧವ್ಯದ ಬಗ್ಗೆ ರಂಗಾಯಣ ರಘು ಮಾತು

Puneeth
Published on

ಬೆಂಗಳೂರು: ನಟ ರಂಗಾಯಣ ರಘು ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಹೇಗೆ ನಗಿಸುತ್ತಾರೋ, ಮೈಕ್ ಹಿಡಿದು ನಿಂತರೆ ಮಾತಿನ ಮೂಲಕವೂ ಹಾಗೇ ನಗಿಸುತ್ತಾರೆ. ಇತ್ತೀಚೆಗಷ್ಟೇ ಮಹೇಶ್ ನಿರ್ದೇಶನದ, ಗಣೇಶ್ ನಾಯಕನಾಗಿರುವ ‘ತ್ರಿಬಲ್ ರೈಡಿಂಗ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಮಾತಿಗೆ ಬಂದ ರಂಗಾಯಣ ರಘು, ‘ಟ್ರಾಫಿಕ್ ಪೊಲೀಸ್ ಕೋಪಗೊಳ್ಳುವ, ಫೈನ್ ಹಾಕುವ ಟೈಟಲ್ ‘ತ್ರಿಬಲ್ ರೈಡಿಂಗ್’. ಹೈಸ್ಕೂಲ್​ನಲ್ಲಿರುವಾಗ ಸೈಕಲ್​ಗೆ ಹೆಡ್​ಲೈಟ್ ಇಲ್ಲ ಅಂತ ಪೊಲೀಸ್​ನವರು ಬಾರಿಸಿದ್ದು ನನಗಿನ್ನೂ ನೆನಪಿದೆ. ನಾನು, ಸಾಧು ಕೋಕಿಲ ಈ ಚಿತ್ರದಲ್ಲಿ ಅಣ್ಣ ತಮ್ಮ ಅಂತೆ. ಅದು ಹೇಗೆ ಸಾಧ್ಯ ಅಂತ ನನಗೂ ಗೊತ್ತಿಲ್ಲ. ಹಾಗಾಗಬೇಕು ಅಂದರೆ ನನಗೆ ಸಾಧು ಅವರಂತೆ ಗುಂಗುರು ಕೂದಲು ಮಾಡಿ ಅಂತ ನಿರ್ದೇಶಕರನ್ನು ಕೇಳಿದ್ದೆ. ನನಗೆ ಈ ಚಿತ್ರದಲ್ಲಿ ಗಂಡಸರನ್ನು ನೋಡಿದರೆ ಆಗದಂತಹ ಪಾತ್ರ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಇನ್ನು ನಾಯಕ ಗಣೇಶ್ ಜತೆಗಿನ ಒಡನಾಟದ ಬಗ್ಗೆ ಹೇಳುತ್ತಾ, ‘ಗಣೇಶನ ಜತೆ ಕೆಲಸ ಮಾಡುವುದೇ ಸುಖ, ನೆಮ್ಮದಿ, ಆತ್ಮವಿಶ್ವಾಸ, ಪ್ರೀತಿ. ಅಪ್ಪು ಸರ್ ಜತೆ ಇದ್ದಂತೆ ಆಗುತ್ತೆ. ಅಪ್ಪು ಸರ್ ಜತೆ ಹಾಗೆನೇ. ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇವೆ. 27 ವರ್ಷಗಳಲ್ಲಿ 350 ಚಿತ್ರಗಳಲ್ಲಿ ನಟಿಸಿದ್ದೇನೆ. 35, 40 ಸಿನಿಮಾ ಗಣಪನ ಜತೆ ಮಾಡಿದೀನಿ. ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ, ಕಳ್ಳ, ಸುಳ್ಳ, ಮಳ್ಳ, ಮಾವ... ಅಪ್ಪನ ಮಾತ್ರ ಜಾಸ್ತಿ ಮಾಡಿದ್ದೇನೆ. ಈ ಚಿತ್ರದಲ್ಲಿ ಮಾವ ಆಗಿದ್ದೇನೆ. ಸಾಧು, ರವಿಶಂಕರ್ ಗೌಡ, ರವಿಶಂಕರ್, ಶರತ್, ಶೋಭರಾಜ್ ಹೀಗೆ ತುಂಬ ಜನ ಇದ್ದಾರೆ. ಇದು ಕನ್ನಡದ ಪರ್ವಕಾಲ. ಇಡೀ ಪ್ರಪಂಚವೇ ನಮ್ಮತ್ತ ತಿರುಗಿ ನೋಡುತ್ತಿದೆ...’ ಎಂದು ಹೇಳಿಕೊಂಡರು.

ಬಳಿಕ ಮಾತಿಗಿಳಿದ ಗಣೇಶ್, ‘ಈ ರೀತಿಯ ಕಥೆ ನಾನು ಮಾಡಿಲ್ಲ. ಟ್ವಿಸ್ಟ್, ಟರ್ನ್, ಎಮೋಷನ್, ಕಾಮಿಡಿ, ಆಕ್ಷನ್, ಅದರಲ್ಲೂ ಕ್ಲೈಮ್ಯಾಕ್ಸ್ ನನಗೆ ಬಹಳ ಇಷ್ಟ. ನಿರ್ದೇಶಕ ಮಹೇಶ್ ಜತೆ ನಾನು ‘ಮುಂಗಾರು ಮಳೆ’ ಚಿತ್ರದಲ್ಲಿ ಕೆಲಸ ಮಾಡಿದ್ದೆ. ರಂಗಾಯಣ ರಘು ಅವರಿಂದ ತುಂಬ ಕಲಿತಿದ್ದೇನೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಇನ್ನು ಕಾರ್ಯಕ್ರಮದಲ್ಲಿ ಗಣೇಶ್, ನಾಯಕಿಯರು ಮತ್ತು ತಾರಾಗಣದ ಜತೆ ವೇದಿಕೆ ಮೇಲೆ ಸ್ಟೆಪ್ ಹಾಕಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net