

ನವದೆಹಲಿ: ಇಪ್ಪತ್ತು ವರ್ಷಗಳ ಹಿಂದೆಯೇ ಸೋಷಿಯಲ್ ಮೀಡಿಯಾ ಆಗಿ ಜನರನ್ನು ತನ್ನತ್ತ ಸೆಳೆದಿದ್ದ, ಸಂಪರ್ಕ ಕಳೆದುಕೊಂಡಿದ್ದ ಸ್ನೇಹಿತರು-ಪ್ರೇಮಿಗಳನ್ನು ಮತ್ತೆ ಬೆಸೆದಿದ್ದ ಆರ್ಕುಟ್ ( Orkut ) ಇದೀಗ ಪುನಃ ಸದ್ದು ಮಾಡುತ್ತಿದ್ದು, ಮತ್ತೆ ಶುರುವಾಗಲಿದೆಯೇ ಎಂಬ ಕುತೂಹಲವೊಂದು ಕೂಡ ಮೂಡಿದೆ.
ಟ್ವಿಟರ್ನಲ್ಲಿನ ಅಲ್ಲೋಲ-ಕಲ್ಲೋಲದ ಹಿನ್ನೆಲೆಯಲ್ಲಿ ರಿಪ್ ಟ್ವಿಟರ್, ಗುಡ್ಬೈ ಟ್ವಿಟರ್ಗಳು ಟ್ರೆಂಡಿಂಗ್ ಆಗುತ್ತಿದ್ದು, ಈ ನಡುವೆ ಜನರು ಬಹುತೇಕ ಮರೆತೇ ಬಿಟ್ಟಿದ್ದಂಥ ಆರ್ಕುಟ್ ಕೂಡ ಟ್ರೆಂಡಿಂಗ್ ಆಗಿರುವುದು ಅಚ್ಚರಿ ಮೂಡಿಸಿದೆ. ಬಹಳಷ್ಟು ಜನರು ಆರ್ಕುಟ್ ಕುರಿತು ಮಾತನಾಡಲಾರಂಭಿಸಿದ್ದು, ಪುನಃ ಆರ್ಕುಟ್ ಶುರುವಾಗಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
ಎಲಾನ್ ಮಸ್ಕ್ ಟ್ವಿಟರ್ ಮಾಲೀಕತ್ವ ಹೊಂದಿದ ಮೇಲೆ ಅರ್ಧಕ್ಕೂ ಹೆಚ್ಚು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದಲ್ಲದೆ, ಹೆಚ್ಚು ಕೆಲಸ ಮಾಡಲು ಆಗದಿದ್ದರೆ ಕೆಲಸವನ್ನೇ ಬಿಡಿ ಎಂದೂ ಹೇಳಿದ್ದಾರೆ. ಮಾತ್ರವಲ್ಲ ಮೂರು ದಿನಗಳ ಟ್ವಿಟರ್ ಕಚೇರಿಗಳೆಲ್ಲ ಮುಚ್ಚಿರುವುದಾಗಿಯೂ ಹೇಳಿದ್ದಾರೆ. ಈ ಮಧ್ಯೆ ಹಲವರು ಆರ್ಕುಟ್ದಿನಗಳನ್ನು ನೆನಪಿಸಿಕೊಂಡಿದ್ದು, ಆರ್ಕುಟ್ ಮತ್ತೆ ಬರಲಿ ಎಂಬ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.
2004ರಿಂದ ಆರಂಭಗೊಂಡಿದ್ದ ಆರ್ಕುಟ್ 2014ರಲ್ಲಿ ಸ್ಥಗಿತಗೊಂಡಿತ್ತು. ಈಗಿನ ಸೋಷಿಯಲ್ ಮೀಡಿಯಾದ ಕಲ್ಪನೆ ಆಗ ಆರ್ಕುಟ್ ಮೂಲಕವೇ ಜಾರಿಯಲ್ಲಿದ್ದರೂ ಆಗ ಅದಕ್ಕೆ ಕಾಲ ಪಕ್ವವಾಗಿರದ್ದರಿಂದ ಹಿನ್ನಡೆಯಾಗಿತ್ತು ಎಂದು ವಿಶ್ಲೇಷಲಾಗಿತ್ತು. ಈಗ ಆರ್ಕುಟ್ ಮತ್ತೆ ಬಂದರೆ ಜನ ಮುಗಿಬಿದ್ದು ಬಳಸಿದರೂ ಅಚ್ಚರಿ ಏನಿಲ್ಲ ಎನ್ನಲಾಗುತ್ತಿದೆ.