ತಲಾಖ್‌..ತಲಾಖ್‌..ತಲಾಖ್‌..; ಮಂಗಳೂರಿನಲ್ಲಿ ತ್ರಿವಳಿ ತಲಾಖ್‌ ಪ್ರಕರಣ ಪತ್ತೆ!

mangluru talak
Published on

ಮಂಗಳೂರು: ವ್ಯಕ್ತಿಯೊಬ್ಬ ಮದುವೆಯಾದ ಆರೇ ತಿಂಗಳಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿ ತಲಾಖ್ ನೀಡಿ, ಮನೆಯಿಂದ ಹೊರದಬ್ಬಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಶಬಾನ ಹಲ್ಲೆಗೊಳಗಾದ ಮಹಿಳೆ. ಈಕೆ ಪತಿ ಮಹಮ್ಮದ್ ಹುಸೇನ್. ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿಯಾಗಿದ್ದು, ಮಹಮ್ಮದ್ ಹುಸೇನ್ ಎಂಬಾತ ಶಬಾನ ಅವರಿಗೆ ತಲಾಖ್​ ನೀಡಿದ್ದಾನೆ.

ಈ ಜೋಡಿ ಆರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಹಮ್ಮದ್ ಹುಸೇನ್ ಮಂಗಳೂರಿನಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದಾನೆ. ಮಹಮ್ಮದ್ ಹುಸೇನ್ ಮೊದಲ ಪತ್ನಿಯಲ್ಲಿ ಎರಡು ಮಕ್ಕಳನ್ನು ಹೊಂದಿದ್ದಾನೆ. ಮೊದಲ ಪತ್ನಿಗೂ ಹಣಕ್ಕಾಗಿ ಪೀಡಿಸಿ ಕೊನೆಗೆ ತಲಾಖ್ ನೀಡಿದ್ದನು.

ನಂತರ ಈತ ಶಬಾನಾರನ್ನು ಎರಡನೇ ಮದುವೆಯಾಗಿದ್ದನು. ಎರಡನೇ ಮದುವೆಯಾಗಿದ್ದ ಪತ್ನಿಯಿಂದ ಹಣ ಒಡವೆ ಸೇರಿ 10 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದನು. ಹುಸೇನ್ ಮತ್ತೇ ಹಣಕ್ಕಾಗಿ ಪೀಡಿಸಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆಗೈದಿದ್ದಾನೆ. ತಲಾಖ್ ನೀಡಿ ಎರಡು ಮಕ್ಕಳೊಂದಿಗೆ ಶಬಾನಾಳನ್ನು ಮನೆಯಿಂದ ಹೊರದಬ್ಬಿದ್ದಾನೆ. ಗಾಯಗೊಂಡಿರುವ ಶಬಾನಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮೂಲಕವಾಗಿ ಮಂಗಳೂರಿನಲ್ಲಿ ನಿಷೇಧಿತ ತ್ರಿವಳಿ ತಲಾಖ್‌ ಪ್ರಕರಣ ಪತ್ತೆಯಾಗಿದೆ. ತ್ರಿಬಲ್ ತಲಾಖ್ ನಿಷೇಧ ಇದ್ದರೂ ತಲಾಖ್ ಹೇಳಿದ ಗಂಡನ ವಿರುದ್ಧ ಪತ್ನಿ ಶಬಾನಾ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನಗೆ ನ್ಯಾಯ ಕೊಡಿ ಎಂದು ಮಾಧ್ಯಮಗಳ ಮುಂದೆ ಶಬಾನಾ ಅಳಲು ತೊಡಿಕೊಂಡಿದ್ದಾರೆ.

ಏನಿದು ತ್ರಿವಳಿ ತಲಾಖ್ ಕಾಯ್ದೆ?: ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪತಿಯು ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡುವ ಪದ್ಧತಿ ಇದೆ. ಇದನ್ನೇ ತ್ರಿವಳಿ ತಲಾಖ್ ಎನ್ನಲಾಗುತ್ತದೆ.ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್​ ಪದ್ಧತಿಗೆ ಸಮ್ಮತಿ ಇದೆ. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿದೆ. ಇಸ್ಲಾಮ್ ನ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್ ಗೆ ಬೇರೆಯೇ ವಿಧಿವಿಧಾನಗಳು ಇವೆ. ಆದರೂ ಈಗೀಗ ಈ ಕಾನೂನು ದುರ್ಬಳಕೆಯಾಗಿ ಇನ್ಸ್ ​ಟಂಟ್ ತಲಾಖ್ (ತತ್ ಕ್ಷಣವೇ ನೀಡುವ ವಿಚ್ಛೇದನ) ಆಗಿಬಿಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net