ಹೆಲಿಕಾಪ್ಟರ್ ಪತನದಲ್ಲಿ ಸಂಚಿನ ಊಹೆ ಬಹುಕಷ್ಟ....

rawath1
Published on
|ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ. ಅತ್ರಿ

ದೇಶದ ಸೇನಾಪಡೆಗಳ ಮುಖ್ಯಸ್ಥರು ಸೇರಿ 13 ಜನರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವುದು ದುಃಖದ ಹಾಗೂ ಆಘಾತಕಾರಿ ಸಂಗತಿ. ಇಂಥದ್ದೊಂದು ಸುದ್ದಿಯನ್ನು ಯಾರೂ ನಿರೀಕ್ಷಿಸಿರುವುದಿಲ್ಲ. ಏಕೆಂದರೆ ವಿಐಪಿಗಳು ಸಂಚರಿಸುವ, ಅದರಲ್ಲೂ ಸೇನಾ ಪಡೆಗಳ ಮುಖ್ಯಸ್ಥರು ಪ್ರಯಾಣಿಸುವ ಹೆಲಿಕಾಪ್ಟರ್​ನಲ್ಲಿ ದೋಷ ಇರುವುದನ್ನು ಊಹಿಸಿಕೊಳ್ಳಲೂ ಅಸಾಧ್ಯ. ಪ್ರತಿ ಬಾರಿ ಹೆಲಿಕಾಪ್ಟರ್ ಹಾರಾಟ ನಡೆಸಬೇಕಾದರೂ ‘ಹಾರಾಟ ಪೂರ್ವ ತಪಾಸಣೆ (ಪ್ರಿ ಫ್ಲೈಟ್ ಚೆಕ್) ನಡೆಸಲಾಗುತ್ತದೆ. ಹೆಲಿಕಾಪ್ಟರ್​ನ ವಿವಿಧ ಭಾಗಗಳ ಕಾರ್ಯಕ್ಷಮತೆಯನ್ನು ಸಂಪೂರ್ಣ ತಪಾಸಣೆ ನಡೆಸಿ ಸರಿಯಿದ್ದರೆ ಪ್ರಮಾಣೀಕರಿಸಲಾಗುತ್ತದೆ. ಇಷ್ಟೇ ಅಲ್ಲದೆ ವಿಐಪಿಗಳ ಹಾರಾಟ ನಡೆಯುವಾಗ, ಒಂದು ತಂಡ ನಡೆಸಿದ ತಪಾಸಣೆಯನ್ನು ಮತ್ತೊಂದು ತಂಡ ನಡೆಸಿ ಮರುಖಾತ್ರಿ ಮಾಡುತ್ತದೆ. ಇಷ್ಟೆಲ್ಲ ಪರೀಕ್ಷೆಗಳ ನಂತರ ಹಸಿರು ನಿಶಾನೆ ಸಿಕ್ಕರೆ ಮಾತ್ರ ಹೆಲಿಕಾಪ್ಟರ್ ಹಾರಾಟ ನಡೆಸುತ್ತದೆ. ಉಪಕರಣಗಳು ಮಾತ್ರವಲ್ಲದೆ, ವಿಮಾನ ಇಂಧನ(ಎಟಿಎಫ್) ಕಲಬೆರಕೆ ಆಗಿರಬಹುದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಎರಡು ಬಾರಿ ಪರೀಕ್ಷೆ ಮಾಡಲಾಗುತ್ತದೆ.

ರಾವತ್ ಅವರು ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲ್ಪಟ್ಟಿದೆ. ಬಹಳಷ್ಟು ರೀತಿಯ ವಾತಾವರಣ ವೈಪರೀತ್ಯವನ್ನು ಇದು ಸಹಿಸಿಕೊಂಡು ಹಾರಾಟ ನಡೆಸಬಲ್ಲದು. ಹೆಲಿಕಾಪ್ಟರ್​ನಲ್ಲೇ ಹವಾಮಾನ ರಾಡಾರ್ ಸಹ ಇರುವುದರಿಂದ, ವೈಪರೀತ್ಯವನ್ನು ಮುಂಚೆಯೇ ಗ್ರಹಿಸಿ ನಿರ್ಧಾರ ಕೈಗೊಳ್ಳಬಹುದು.

ತಮಿಳುನಾಡಿನ ಕೊಯಮತ್ತೂರಿನ ಬಳಿ ಇರುವ ಸೂಲೂರಿನಿಂದ ರಾವತ್ ಅವರು ತೆರಳುತ್ತಿದ್ದ ಊಟಿಯ ವೆಲ್ಲಿಂಗ್​ಟನ್​ಗೆ ವಾಯುಮಾರ್ಗದಲ್ಲಿ ಸುಮಾರು 40 ನಿಮಿಷದ ಮಾರ್ಗ. ಈ ನಡುವೆ ಹೆಲಿಕಾಪ್ಟರ್ ಪತನವಾಗಿರುವ ಕೂನೂರು ಕೆಳಭಾಗದಲ್ಲಿದ್ದು, ಊಟಿ ಎತ್ತರ ಪ್ರದೇಶದಲ್ಲಿದೆ. ಕೆಳಮಟ್ಟದಿಂದ ಎತ್ತರಕ್ಕೆ ಏರಬೇಕಾದರೆ ಮೋಡಗಳು ಅಥವಾ ಮಂಜು ಕವಿದು ಎದುರಿನ ಮಾರ್ಗ ಕಾಣದೆ ಅಪಘಾತವಾಗಿರುವ ಸಾಧ್ಯತೆ ಇರಬಹುದು. ಇದನ್ನು ಹೊರತುಪಡಿಸಿ, ಯಾರೋ ಶತ್ರುಗಳು ದಾಳಿ ನಡೆಸಿದ್ದಾರೆ ಎಂಬಂತಹ ಊಹೆ ಮಾಡುವುದು ಬಹುತೇಕ ಅಸಾಧ್ಯ. ಏಕೆಂದರೆ ಸೂಲೂರು ಅತ್ಯಂತ ಸುರಕ್ಷಿತ ಸ್ಥಳ ಮತ್ತು ಸೇನಾ ಮುಖ್ಯಸ್ಥರ ಹೆಲಿಕಾಪ್ಟರ್​ಗೆ ಬಹಳಷ್ಟು ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಅಪಘಾತವಾಗಲಿ, ಪತನವಾಗಲಿ ಆಗದಂತೆ ಇಷ್ಟೆಲ್ಲ ಸಾಧ್ಯತೆಯಿದ್ದರೂ ಘಟನೆ ನಡೆದಿದೆ. ಇದರ ಕುರಿತು ಉನ್ನತ ಮಟ್ಟದ ತನಿಖೆ ಮಾತ್ರ ಸತ್ಯ ಹೊರಗೆಡವಬಲ್ಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net