

ಗೋಣಿಕೊಪ್ಪಲು: ಇಲ್ಲಿನ ವಾಹನ ಚಾಲಕ ಹಾಗೂ ಮಾಲೀಕರ ಸಂಘದ ವತಿಯಿಂದ ಮಾಜಿ ಸೈನಿಕರನ್ನು ಗೌರವಿಸುವ ಮೂಲಕ ವಿಶೇಷ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಸಂಘದ ಅಧ್ಯಕ್ಷ ಸಿ.ಕೆ.ಬೋಪಣ್ಣ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇನೆಯಲ್ಲಿ ನಿರಂತರ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿರುವ ಗೋಣಿಕೊಪ್ಪ ನಗರದ ಮಾಜಿ ಸೈನಿಕರಾದ ಮಣಿಕಂಠ, ಕೊರಿಯಸ್, ಕೆ.ಡಿ.ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ ಮಾತನಾಡಿ, ಸೈನಿಕರನ್ನು ಗೌರವದಿಂದ ಕಾಣಬೇಕು. ಸೇನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ನಮ್ಮ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಾಹನ ಚಾಲಕ ಸಂಘವು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಹಲವು ರೀತಿಯ ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದೆ. ಈ ಬಾರಿ ನಿವೃತ್ತ ಸೈನಿಕರನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಅಲ್ಲದೆ ಶೈಕ್ಷಣಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಮಾತನಾಡಿ, ಸಂಘವು ನಿರಂತರವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂದುವರಿಯುತ್ತಿದೆ. ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ ಎಂದರು.
ಸಂಘದ ಉಪಾಧ್ಯಕ್ಷ ಶರತ್‌ಕಾಂತ, ಸಂಘದ ಪದಾಧಿಕಾರಿಗಳಾದ ಬಿ.ಎಸ್.ಸುರೇಶ್, ಕೆ.ಎಂ.ಅಬ್ದುಲ್ ಕರೀಂ, ಕೆ.ವಿ.ಅನಿಲ್, ಎನ್.ಕೃಷ್ಣ, ಎಚ್.ಸಿ.ಶ್ರೀನಿವಾಸ್, ಎ.ಕೆ.ಅಶೋಕ, ಎ.ಕೆ.ಅನೀಶ್ ಹಾಗೂ ಬಿ.ಆರ್.ಕೀರ್ತಿಕುಮಾರ್ ಉಪಸ್ಥಿತರಿದ್ದರು.