ಮರೆಯಾದ ಪ್ರಯೋಗಶೀಲ ಶಿಕ್ಷಣ ತಜ್ಞ ಡಾ.ಬಿ.ಯಶೋವರ್ಮ

Yashovarma
Published on
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಡಾ.ಬಿ.ಯಶೋವರ್ಮ 23 ವರ್ಷ ಸೇವೆ ಸಲ್ಲಿಸಿ, ಕಾಲೇಜನ್ನು ರಾಷ್ಟ್ರಮಟ್ಟಕ್ಕೆ ಎತ್ತರಿಸಿದ ಕೀರ್ತಿಗೆ ಭಾಜನರು. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ, ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದವರು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಕೊಟ್ಟು ಎಸ್​ಡಿಎಂ ಎಂಬುದನ್ನು ಶಿಕ್ಷಣ ರಂಗದಲ್ಲಿ ಬ್ರ್ಯಾಂಡ್ ಮಾಡಿದ ಪ್ರಯೋಗಶೀಲ ಶಿಕ್ಷಣ ತಜ್ಞ ಇವರು.

| ದಿವ ಕೊಕ್ಕಡ

ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಉನ್ನತ ಶಿಕ್ಷಣವನ್ನು ತಮ್ಮ ಅತ್ಯುನ್ನತ ಆಲೋಚನೆಗಳೊಂದಿಗೆ ಅತ್ಯುತ್ಕೃಷ್ಟಗೊಳಿಸುವುದಕ್ಕೆ ಶಿಕ್ಷಣವನ್ನೇ ಉಸಿರಾಗಿಸಿಕೊಂಡು ಬದುಕನ್ನೇ ಧಾರೆಯೆರೆದ ಇವರ ಸಾಧನೆ ಅಮೋಘ. 1955ರಲ್ಲಿ ಜನಿಸಿದ ಯಶೋವರ್ಮ, ಧಾರವಾಡದಲ್ಲಿ ಸಸ್ಯಶಾಸ್ತ್ರ ವಿಷಯದಲ್ಲಿ ಉನ್ನತ ಶಿಕ್ಷಣವನ್ನೂ, ಡಾಕ್ಟರೇಟ್ ಪದವಿಯನ್ನೂ ಮುಗಿಸಿ 1993ರಿಂದ ಉಜಿರೆಯ ಎಸ್​ಡಿಎಂ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡರು. ಪ್ರೊ.ಎಸ್.ಪ್ರಭಾಕರ್ ಸ್ಥಾಪಕ ಪ್ರಾಂಶುಪಾಲರಾಗಿ ಹಾಕಿಕೊಟ್ಟ ಗಟ್ಟಿ ಪಂಚಾಂಗದಲ್ಲಿ ಯಶೋವರ್ಮ ಅವರು ಅದ್ಭುತ ಶಿಕ್ಷಣಸೌಧ ಕಟ್ಟಿ ರಾಷ್ಟ್ರವೇ ಉಜಿರೆಯತ್ತ ನೋಡುವಂತೆ ಮಾಡಿದರು.

ಶೈಕ್ಷಣಿಕ ಪ್ರಯೋಗಗಳು: ಉನ್ನತ ಶಿಕ್ಷಣ ಪಠ್ಯಕ್ಕೆ ಸೀಮಿತವಾಗಬಾರದು ಎಂದು ಸಾಂಸ್ಕೃತಿಕ ಚಟುವಟಿಕೆಗಳಾದ ಯಕ್ಷಗಾನ, ನಾಟಕ, ಸಾಹಿತ್ಯ, ಸಂಗೀತ, ಜಾನಪದ, ಕ್ರೀಡೆ ಮೊದಲಾದ ವಿಷಯಗಳಿಗೂ ಹೆಚ್ಚಿನ ಗಮನ ಹರಿಸಿ ಸೂಕ್ತ ವೇದಿಕೆ ಒದಗಿಸಿಕೊಟ್ಟು ಪದವಿ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದರು. ಇಂಟರ್ನ್​ಶಿಪ್, ವಿಸ್ತರಣಾ ಚಟುವಟಿಕೆ, ವಿಸ್ತರಣೋಪನ್ಯಾಸ, ಇ-ಲೆಕ್ಚರ್, ರೆಕಾರ್ಡೆಡ್ ಲೆಕ್ಚರ್, ರಾಜ್ಯದಲ್ಲೇ ಪ್ರಥಮ ಬಾರಿ ಆನ್​ಲೈನ್ ಪರೀಕ್ಷೆ, ಕಡ್ಡಾಯ 40 ಗಂಟೆ ಗ್ರಂಥಾಲಯ, ತರಗತಿಗಳಲ್ಲಿ ಪ್ರಚಲಿತ ವಿದ್ಯಮಾನ, ಜೀವನಮೌಲ್ಯಗಳ ಓದು, ಭಿತ್ತಿ ಪತ್ರಿಕೆಗಳು, ವಾರ್ಷಿಕ ಸಂಚಿಕೆ, ನಾಲೆಡ್ಜ್ ಕಾರ್ನರ್, ಲರ್ನಿಂಗ್ ಕಾರ್ನರ್, ಗ್ರಂಥಾಲಯದಲ್ಲಿ ಇ-ಬುಕ್ ವ್ಯವಸ್ಥೆ-ಒಪೆಕ್, ಓಪನ್ ಏರ್ ಕ್ಲಾಸ್​ರೂಮ್ ಮೊದಲಾದ ಹಲವು ಪ್ರಯೋಗಗಳನ್ನು ಶಿಕ್ಷಣದಲ್ಲಿ ತಂದು ಸೈ ಎನಿಸಿಕೊಂಡ ಓರ್ವ ಅಪೂರ್ವ ಶಿಕ್ಷಣ ತಪಸ್ವಿ.

ಶಿಕ್ಷಣ ಪೂರಕ ಅನುಕೂಲತೆಗಳು: ಗುಣಮಟ್ಟದ ಶಿಕ್ಷಣಕ್ಕೆ ಸುಸಜ್ಜಿತ ಅನುಕೂಲತೆಗಳು, ವಿದ್ಯಾರ್ಥಿಸ್ನೇಹಿ ಕ್ಯಾಂಪಸ್ ಕೂಡ ಅಗತ್ಯ. ಈ ನಿಟ್ಟಿನಲ್ಲಿ ಯಶೋವರ್ಮ ಅವರು, ಡಿಜಿಟಲೈಸ್ಡ್ ಕ್ಯಾಂಪಸ್, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಎಜುಸ್ಯಾಟ್ ಕೇಂದ್ರ ಸ್ಥಾಪನೆ, ಸಮುದಾಯ ಬಾನುಲಿ ಕೇಂದ್ರ, ಸುಸಜ್ಜಿತ ಮಲ್ಟಿಮೀಡಿಯಾ ಸ್ಟುಡಿಯೋ, ಲ್ಯಾಂಗ್ವೇಜ್ ಲ್ಯಾಬ್, ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಮಲ್ಟಿಜಿಮ್ ಸೆಂಟರ್, ಮಲ್ಟಿಫೆಸಿಲಿಟಿ ಸೆಂಟರ್, ಕೊ-ಆಪರೇಟಿವ್ ಸ್ಟೋರ್, ಬ್ಯಾಂಕ್, ಪೋಸ್ಟ್ ಆಫೀಸು, ಆಕರ್ಷಕ ಕ್ಯಾಂಟಿನ್, ವಿದ್ಯಾರ್ಥಿ ನಿಲಯಗಳು, ಕಲ್ಚರಲ್ ಸೆಂಟರ್, ಹತ್ತಕ್ಕೂ ಹೆಚ್ಚು ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಮಣ್ಣು ಪರೀಕ್ಷಾ ಕೇಂದ್ರ, ಹೈಟೆಕ್ ಗ್ರಂಥಾಲಯ-ಹೀಗೆ ಅನೇಕ ಉತ್ಕೃಷ್ಟ ಸವಲತ್ತುಗಳನ್ನು ತಂದು ನಿಜವಾದ ಅರ್ಥದಲ್ಲಿ ಕಾಲೇಜನ್ನು ಬೆಳೆಸಿದರು, ಉನ್ನತೀಕರಿಸಿದರು.

ಮಾನ್ಯತೆಗಳು: ಹೊಸ ಹೊಸ ಪ್ರಯೋಗಗಳಿಗೆ ಪೂರಕವಾಗಿ ಶಿಕ್ಷಣ ಸಂಸ್ಥೆಗೆ ಬೇರೆ ಬೇರೆ ಮಾನ್ಯತೆಗಳನ್ನು ತರುವುದರಲ್ಲೂ ಯಶೋವರ್ಮರು ಅದ್ಭುತ ಯಶಸ್ಸನ್ನು ಕಂಡಿದ್ದಾರೆ. ಕಾಲೇಜಿಗೆ ಮಂಗಳೂರು ವಿವಿಯಿಂದ ಸ್ವಾಯತ್ತ ಮಾನ್ಯತೆ, ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆ ನ್ಯಾಕ್​ನಿಂದ ಸತತ ಮೂರು ಬಾರಿ ಎ ಗ್ರೇಡ್ (3.61) ಮಾನ್ಯತೆ, ಯುಜಿಸಿಯಿಂದ ಉತ್ಕೃಷ್ಟತಾ ಸಾಮರ್ಥ್ಯ ಕೇಂದ್ರವೆಂಬ ಹೆಗ್ಗಳಿಕೆ ಮತ್ತು ರಾಷ್ಟ್ರ ಮಟ್ಟದ ಹಲವು ಮನ್ನಣೆಗಳು ಹಳ್ಳಿಯ ಎಸ್​ಡಿಎಂ ಕಾಲೇಜಿಗೆ ಬರುವಂತೆ ಮಾಡುವಲ್ಲಿ ಇವರ ಪ್ರಯತ್ನ ಪ್ರಾತಃಸ್ಮರಣೀಯ.

ಡಾ.ಬಿ.ಯಶೋವರ್ಮರ ಅಕಾಲಿಕ ನಿಧನದಿಂದ ಆಘಾತವಾಗಿದೆ. ಸರಳ, ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅವರು ಸ್ನೇಹಜೀವಿ. ಪರಿಶ್ರಮಪಟ್ಟು ಯಾವುದೇ ಕಾರ್ಯ ಮಾಡುತ್ತಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಪ್ರಗತಿಯಲ್ಲಿ ಅವರ ಅಪಾರ ಶ್ರಮವಿದೆ. ಸಮಸ್ಯೆಗಳು ಬಂದಾಗ ಕುಗ್ಗದೆ, ಯಶಸ್ಸು ಬಂದಾಗ ಹಿಗ್ಗದೆ ಸಮಚಿತ್ತ ಕಾಪಾಡುವ ಜ್ಞಾನಿಯಾಗಿದ್ದರು. | ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿ

ಡಾ.ಬಿ.ಯಶೋವರ್ಮ ಇನ್ನಿಲ್ಲ

ಬೆಳ್ತಂಗಡಿ (ದ.ಕ.): ಎಸ್​ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಉಜಿರೆ ನಿವಾಸಿ ಡಾ.ಬಿ.ಯಶೋವರ್ಮ (67) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ತಡರಾತ್ರಿ ಸಿಂಗಾಪುರದಲ್ಲಿ ನಿಧನರಾದರು. ಪತ್ನಿ ಸೋನಿಯಾ ವರ್ಮ, ಪುತ್ರರಾದ ಪೂರನ್ ವರ್ಮ, ಕೆಯೂರ್ ವರ್ಮ ಅವರನ್ನು ಅಗಲಿದ್ದಾರೆ. ಮೂಲತಃ ಮೂಡುಬಿದಿರೆ ತಾಲೂಕಿನ ಪೆರಾಡಿ ಬೀಡು ನಿವಾಸಿಯಾದ ಅವರು, ಮೂಡುಬಿದಿರೆ ಜೈನ್ ಹೈಸ್ಕೂಲಿನ ಕನ್ನಡ ಪಂಡಿತರೆಂದೇ ಚಿರಪರಿಚಿತರಾಗಿದ್ದ ದಿ.ಟಿ.ರಘುಚಂದ್ರ ಶೆಟ್ಟಿ ಮತ್ತು ಪೆರಾಡಿ ಬೀಡು ಪುಷ್ಪಾವತಿ ದಂಪತಿ ಪುತ್ರ. ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿ, ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬಳಿಕ ಉಜಿರೆ ಎಸ್​ಡಿಎಂ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಬಳಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net