

ಕಾಠ್ಮಂಡು: ಕರೊನಾ ವೈರಸ್ ಬಂದ ದಿನದಿಂದ ಎಲ್ಲೆಲ್ಲೂ ಮಾಸ್ಕ್ದ್ದೇ ಮಾತು. ಒಂದೆಡೆ ಲಾಕ್ಡೌನ್ನಿಂದಾಗಿ ಮದುವೆಗಳು ಮುಂದೂಡಲ್ಪಟ್ಟಿದ್ದರೆ, ಇನ್ನು ಕೆಲವರು ಲಾಕ್ಡೌನ್ ನಡುವೆಯೇ ಕೆಲವೇ ಜನರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ.
ಮದುವೆ-ಸಮಾರಂಭಗಳಿಗೆ ಅನುಮತಿ ನೀಡಿರುವ ಹಲವು ಸರ್ಕಾರಗಳು ಕಡ್ಡಾಯವಾಗಿ ಕೆಲವೊಂದು ನಿಯಮ ಪಾಲನೆ ಮಾಡಬೇಕು ಎಂದಿದೆ. ಅವುಗಳ ಪೈಕಿ ಪ್ರಮುಖವಾದದ್ದು ಮಾಸ್ಕ್ ಧರಿಸುವಿಕೆ.
ಇದೇ ಕಾರಣಕ್ಕೆ ಮದುಮಕ್ಕಳು ಮಾಸ್ಕ್ ಧರಿಸಿಯೇ ಮದುವೆಯಾದಂಥ ಹಲವಾರು ವಿಡಿಯೋ, ಫೋಟೋಗಳು ವೈರಲ್ ಆಗಿವೆ. ಆದರೆ ನೇಪಾಳದ ಕಾಠ್ಮಂಡುವಿನಲ್ಲಿ ಸ್ವಲ್ಪ ವಿಭಿನ್ನ ಎನಿಸುವಂಥ ಮದುವೆ ನಡೆದಿದ್ದು ಅದೀಗ ಭಾರಿ ವೈರಲ್ ಆಗಿದೆ.
ಅದೇನೆಂದರೆ, ಸಾಮಾನ್ಯವಾಗಿ ಇಲ್ಲಿಯ ಪದ್ಧತಿಯಲ್ಲಿ ಹಾರ ಬದಲಾವಣೆ ಜತೆಗೆ ಮದುವೆಯ ವೇಳೆ ಉಂಗುರದ ಬದಲಾವಣೆಯೂ ನಡೆಯುತ್ತದೆ. ಆದರೆ ಇಲ್ಲಿ ನಡೆದ ಒಂದು ಮದುವೆಯಲ್ಲಿ ಹಾರ ಬದಲಾವಣೆಯ ನಂತರ ಮಾಸ್ಕ್ ಬದಲಾವಣೆಯನ್ನು ವಧು-ವರರು ಮಾಡಿಕೊಂಡಿದ್ದಾರೆ. ಇದರ ಬದಲಾವಣೆ ನಂತರ ಅಲ್ಲಿ ಇದ್ದ ಜನರು ಚಪ್ಪಾಳೆ, ಸೀಟಿಯ ಮೂಲಕ ಶುಭ ಹಾರೈಸಿದ್ದಾರೆ.
ಇದನ್ನು ಮದುವೆಯಲ್ಲಿ ಹಾಜರು ಇದ್ದ ಶ್ವೇತಾ ಅಧಿಕಾರ್ ಎನ್ನುವವರು ತಮ್ಮ ಟ್ವಿಟರ್ನಲ್ಲಿ ಇದರ ವಿಡಿಯೋ ಶೇರ್ ಮಾಡಿದ್ದರು. ಇದೀಗ ಭಾರಿ ವೈರಲ್ ಆಗಿದ್ದು, ಸಾವಿರಾರು ರೀಟ್ವೀಟ್ಗಳನ್ನು ಕಂಡಿದೆ, ಜತೆಗೆ ಸಾವಿರಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ.
ವಧು-ವರರು ಪರಸ್ಪರ ಹೂವಿನ ಹಾರದ ಬದಲು ಮಾಸ್ಕ್ ಹಾರ ಹಾಕಿಕೊಂಡರೂ ಅಚ್ಚರಿಯಿಲ್ಲ, ಇಂಥ ದಿನ ಶೀಘ್ರವೇ ಬರಲಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)