ವಾಹನ ಸವಾರರ ಮಡಕಶಿರಾ ಭಾಗದ ಕಿರಿಕಿರಿಗೆ ಮುಕ್ತಿ!

Aato
Published on

ತುಮಕೂರು: ಗಡಿಭಾಗದ ಹಳದಿ ನಂಬರ್ ಬೋರ್ಡ್ ವಾಹನಗಳಿಗೆ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಕೊಡುಗೆ ನೀಡಿದೆ. ರಾಜ್ಯ ಹೆದ್ದಾರಿ 3ರ ಮಧುಗಿರಿ, ಪಾವಗಡ ನಡುವಿನ ಮಡಕಶಿರಾ ಚೆಕ್‌ಪೋಸ್ಟ್‌ನಲ್ಲಿ ರಾಜ್ಯದ ವಾಹನಗಳಿಗೆ ವಿಧಿಸುತ್ತಿರುವ ದಂಡ ಸಹಿತ ತಾತ್ಕಾಲಿಕ ತೆರಿಗೆ ತಪ್ಪಿಸಿ ವಾಹನ ಸವಾರರಿಗೆ ಆಗುತ್ತಿರುವ ಬಹುದಿನಗಳ ತೊಂದರೆ ತಪ್ಪಿಸಿದೆ. ಪ್ರತಿದಿನ ಪಾವಗಡದಿಂದ ಜಿಲ್ಲಾ ಕೇಂದ್ರ ತುಮಕೂರು ಹಾಗೂ ಮಧುಗಿರಿಗೆ ಬರುತ್ತಿದ್ದ ಹಳದಿ ಬೋರ್ಡ್ ವಾಹನಗಳಿಗೆ ಆಂಧ್ರದ ಸಾರಿಗೆ ಅಧಿಕಾರಿಗಳು ದಂಡ ಹಾಕುತ್ತಿದ್ದರು. ನಮ್ಮ ರಾಜ್ಯದಲ್ಲಿದ್ದರೂ ಬೇರೆ ರಾಜ್ಯದ ಸಾರಿಗೆ ಅಧಿಕಾರಿಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ವಾಹನ ಸವಾರರ ಸಮಸ್ಯೆಗೆ ರಾಜ್ಯದ ಸಾರಿಗೆ ಅಧಿಕಾರಿಗಳು ಪರಿಹಾರ ಒದಗಿಸಿದ್ದು ಸಮಸ್ಯೆ ಪರಿಹಾರವಾಗಿದೆ. ಮಧುಗಿರಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಅ.25ರಂದು ತುಮಕೂರು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಸಮಸ್ಯೆ ಬಗೆಹರಿಸಿರುವುದನ್ನು ತಿಳಿಸಿದ್ದು ಆಂಧ್ರ ಸಾರಿಗೆ ಇಲಾಖೆಗೆ ಕಾನೂನು ಪಾಠ ಮಾಡಲಾಗಿದೆ. ಗಡಿಭಾಗದಲ್ಲಿ 16 ಕಿಮೀ ಸಂಚರಿಸಲು ಅವಕಾಶವಿದ್ದು ದಂಡ ವಸೂಲಿ ಮಾಡಬಾರದು ಎಂದು ಸೂಚಿಸಲಾಗಿದೆ. ಪಾವಗಡ ಭಾಗದಿಂದ ಪ್ರತಿದಿನ ನೂರಾರು ವಾಹನಗಳು ಮಡಕಶಿರಾ ಭಾಗದಲ್ಲಿ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು, ಇದೇ ಕಾರಣಕ್ಕೆ ಗ್ರಾಹಕರಿಂದ ಹೆಚ್ಚು ಬಾಡಿಗೆ ಕೂಡ ವಸೂಲಿ ಮಾಡುತ್ತಿದ್ದು ಜನರಿಗೆ ಹೊರೆಯಾಗಿತ್ತು. ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮಾಡಿದ್ದ ಮನವಿ ಫಲ ನೀಡಿದ್ದು ಬಹುದಿನದ ಸಮಸ್ಯೆ ಬಗೆಹರಿದಿದೆ.

ಒಂದು ವಾಹನದ ಪ್ರಯಾಣ ಆರಂಭವಾದ ಸ್ಥಳ ಮತ್ತು ಅಂತ್ಯದ ಸ್ಥಳ ಒಂದೇ ರಾಜ್ಯಕ್ಕೆ ಸೇರಿದ್ದು ಮಧ್ಯೆ ಮತ್ತೊಂದು ರಾಜ್ಯದ ಪ್ರದೇಶವಿದ್ದರೆ ಅಂತಹ ಸಂದರ್ಭದಲ್ಲಿ 16 ಕಿಮೀಗಳವರೆಗೆ ಅದೇ ರಾಜ್ಯದ ರಹದಾರಿಯಲ್ಲಿ ಸಂಚರಿಸಲು ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ88(1)ರಲ್ಲಿ ಅವಕಾಶವಿದೆ. ಸುಧಾಮಣಿ , ಎಆರ್‌ಟಿಒ ಮಧುಗಿರಿ ಮಹಮ್ಮದ್ ಹುಸೇನ್, ರಾಜ್ಯ ಸಹಕಾರ್ಯದರ್ಶಿ, ಕೆಟಿಡಿಒನೆರೆಯ ಆಂಧ್ರದ ಆರ್‌ಟಿಒದಿಂದ ಆಗುತ್ತಿದ್ದ ಸಮಸ್ಯೆ ಬಗ್ಗೆ ಸೆಪ್ಟೆಂಬರ್ 27ರಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಕೆಟಿಡಿಒ ವತಿಯಿಂದ ಮನವಿ ಮಾಡಲಾಗಿತ್ತು. ಸಮಸ್ಯೆ ಬಗೆಹರಿಸಿದ ಜಿಲ್ಲಾಡಳಿತಕ್ಕೆ ಅಭಿನಂದನೆಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net