ಸಾರಿಗೆ ಸೌಕರ್ಯ ಹಂಚಿಕೆ ಭರಪೂರ

buget feb 01 2020
Published on

ನವದೆಹಲಿ: ದೇಶದ ಜೀವನಾಡಿಯಾದ ಸಾರಿಗೆ ಅಭಿವೃದ್ಧಿಗೆ ಬಜೆಟ್​ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ರಸ್ತೆ, ವಾಯು, ಜಲ ಸಾರಿಗೆಗೆ ಒಟ್ಟಾರೆ 1.70 ಲಕ್ಷ ಕೋಟಿ ರೂ. ಅನುದಾನವನ್ನು ಕೇಂದ್ರ ಬಜೆಟ್​ನಲ್ಲಿ ಒದಗಿಸಲಾಗಿದೆ. ಜನಸಾಮಾನ್ಯರ ಸಾರಿಗೆಯಾದ ರೈಲ್ವೆಗೆ  70 ಸಾವಿರ ಕೋಟಿ ರೂ. ಹಂಚಿಕೆಯಾಗಿದೆ. ವಿಮಾನಯಾನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ  3,797 ಕೋಟಿ ರೂ. ಅನುದಾನ ಮೀಸಲು ಇರಿಸಲಾಗಿದೆ. ವಿವಿಧ ವಲಯಗಳಲ್ಲಿ ಉದ್ಯೋಗ ಸೃಜನೆಯ ಬೃಹತ್ ಉದ್ದೇಶದ ಮೂಲಸೌಕರ್ಯ ವೃದ್ಧಿಗೆ 103 ಲಕ್ಷ ಕೋಟಿ ರೂ. ಅನುದಾನವನ್ನು ಕಳೆದ ಡಿಸೆಂಬರ್​ನಲ್ಲಿ ಘೋಷಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗ ಬಜೆಟ್​ನಲ್ಲಿ 6,500 ಯೋಜನೆಗಳಿಗೆ ಈ ಅನುದಾನ ವಿನಿಯೋಗವಾಗಲಿದೆ ಎಂದು ಪುನರುಚ್ಚರಿಸಿದ್ದಾರೆ.

ರೈಲು ಹಳಿಗಳ ಎರಡೂ ಬದಿಗಳಲ್ಲಿ ಸೋಲಾರ್ ಫಲಕ ಅಳವಡಿಕೆ ಮಾಡುವ ಪ್ರಸ್ತಾಪವನ್ನು ಬಜೆಟ್​ನಲ್ಲಿ ಮಂಡಿಸಲಾಗಿದೆ. ಸಾರಿಗೆ ವೆಚ್ಚ ಕಡಿಮೆ ಮಾಡುವ ಉದ್ದೇಶ ಹೊಂದಿದ್ದು, 2030ರೊಳಗಾಗಿ ರೈಲ್ವೆಯನ್ನು ಸೌರಶಕ್ತಿಯಲ್ಲಿ ಸ್ವಾವಲಂಬಿಯಾಗಿ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದರು. ಮುಂದಿನ ದಿನಗಳಲ್ಲಿ ಪ್ರವಾಸಿ ತಾಣಗಳಿಗೆ ಸಂಚಾರ ತೇಜಸ್ ರೈಲು ಹೆಚ್ಚಿಸುವುದಾಗಿಯೂ ಅವರು ಘೋಷಿಸಿದರು.

ಸಾರ್ವಜನಿಕ-ಖಾಸಗಿ ಸಹ ಭಾಗಿತ್ವದಲ್ಲಿ (ಪಿಪಿಪಿ) 150 ರೈಲುಗಳ ಸಂಚಾರಕ್ಕೆ ಬಜೆಟ್​ನಲ್ಲಿ ಹಸಿರು ನಿಶಾನೆ ತೋರಲಾಗಿದೆ. ಪಿಪಿಪಿ ಸಹಕಾರದೊಂದಿಗೆ ನಾಲ್ಕು ರೈಲ್ವೆ ನಿಲ್ದಾಣಗಳನ್ನು ಸಮಗ್ರವಾಗಿ ಮರುಅಭಿವೃದ್ಧಿ ಮಾಡುವ ಪ್ರಸ್ತಾಪವೂ ಬಜೆಟ್​ನಲ್ಲಿದೆ. ಈಗಾಗಲೇ ಅನೇಕ ಖಾಸಗಿ ಸಂಸ್ಥೆಗಳು ಸಹಭಾಗಿತ್ವಕ್ಕೆ ಆಸಕ್ತಿ ತೋರಿಸಿದ್ದು, ಅದರಲ್ಲಿ ಟಾಟಾ ರಿಯಾಲಿಟಿ ಆಂಡ್ ಇನ್​ಫ್ರಾಸ್ಟ್ರಕ್ಚರ್, ಬೊಂಬಾರ್ಡಿಯರ್, ಹ್ಯೂಂಡೈ ರೊಟೆಮ್ ಕಂಪೆನಿ, ಸಿಎಎಫ್ ಇಂಡಿಯಾ, ಹಿಟಾಚಿ ಇಂಡಿಯಾ ಆಂಡ್ ಸೌತ್ ಏಷ್ಯಾ ಎಸ್ಸೆಲ್ ಗ್ರೂಪ್, ಅದಾನಿ ಪೋರ್ಟ್ಸ್ ಆಂಡ್ ಎಸ್​ಇಝೆಡ್, ಟಾಲ್ಗೊ, ಸೀಮೆನ್ಸ್ ಲಿ., ಆಲ್​ಸ್ಟೋಮ್ ಟ್ರಾನ್ಸ್​ಪೋರ್ಟ್ ಮುಂತಾದವು ಉತ್ಸುಕವಾಗಿವೆ ಎಂದು ಸಚಿವೆ ನಿರ್ಮಲಾ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ರೈಲ್ವೆಗೆ 70 ಸಾವಿರ ಕೋಟಿ ರೂ.

ಈ ಸಾರಿ ಬಜೆಟ್​ನಲ್ಲಿ ರೈಲ್ವೆಗೆ 70 ಸಾವಿರ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಬಂಡವಾಳ ವೆಚ್ಚ ವಿನಿಯೋಗವಾಗಿ  1.61 ಲಕ್ಷ ಕೋಟಿ ರೂ. ಘೋಷಿಸಲಾಗಿದ್ದು, ಕಳೆದ ವರ್ಷಕ್ಕಿಂತ ಶೇ.3 ಅಧಿಕವಾಗಿದೆ. 20192020ರಲ್ಲಿ  1.56 ಲಕ್ಷ ಕೋಟಿ ರೂ. ನೀಡಲಾಗಿತ್ತು. 2018-19ಕ್ಕೆ ಹೋಲಿಸಿದರೆ, ಇದು ಶೇ.17.2 ಹೆಚ್ಚಾಗಿತ್ತು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಪ್ರಯಾಣಿಕ, ಸರಕು-ಸಾಗಣೆ, ರೈಲ್ವೆ ನೇಮಕಾತಿ ಇತರ ಮೂಲಗಳಿಂದ ಒಟ್ಟಾರೆ ಮೊತ್ತದ ಶೇ.9.5 ಅನ್ನು ಆದಾಯ ಗುರಿ ಹೊಂದಲಾಗಿದೆ. ಪ್ರಯಾಣಿಕರ ಮೂಲಸೌಕರ್ಯಕ್ಕಾಗಿ -2,725.63 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. 1265 ಮೆಟ್ರಿಕ್ ಟನ್ ಸರಕು ಸಾಗಣೆ ಗುರಿ ಹಾಕಿಕೊಳ್ಳಲಾಗಿದೆ. 2019-20ಕ್ಕೆ ಹೋಲಿಸಿದರೆ, ಇದು 42 ಮೆ.ಟನ್ (ಶೇ. 3.4) ಹೆಚ್ಚಳವಾಗಿದೆ. ಆದಾಯ ಮತ್ತು ವೆಚ್ಚ ಸರಿದೂಗಿಸುವುದು ರೈಲ್ವೆ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಂದಾಜು  92,993.07 ಕೋಟಿ ರೂ. ಇಲಾಖೆ ನೌಕರರ ಸಂಬಳಕ್ಕೆ ಹೋಗಲಿದ್ದು, ಈ ವರ್ಷ ಮತ್ತೆ 6 ಸಾವಿರ ಕೋಟಿ ರೂ. ಹೆಚ್ಚಳವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net