

ಬೆಂಗಳೂರು: ಅನಂತ್ ಸುಬ್ಬರಾವ್ ನೇತೃತ್ವದ ಸಂಘಟನೆ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದೆ.21 ಮಾರ್ಚ್ನಿಂದ ಅನಿರ್ಧಿಷ್ಟಅವಧಿ ಮುಷ್ಕರ ಶುರುವಾಗಲಿದ್ದು ಅನಂತ್ ಸುಬ್ಬರಾವ್ ಮುಖ್ಯಮಂತ್ರಿಗೂ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಬಹುದಿನಗಳ ಬೇಡಿಕೆಗೆ ಮಣಿದಿರುವ ಸಾರಿಗೆ ಇಲಾಖೆ, ವೇತನ ಪರಿಷ್ಕರಣೆ ಮಾಡಿದೆ. ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶೇಕಡಾ 15ರಷ್ಟು ವೇತನ ಹೆಚ್ಚಳ ಮಾಡುವಕ್ಕೆ ತೀರ್ಮಾನಿಸಿರುವುದಾಗಿ ಹೇಳಿದ್ದರು.
ಇದಕ್ಕೆ ಸಂಬಂಧಿಸಿದಂತೆ ಎಐಯುಟಿಸಿ ಅಧ್ಯಕ್ಷ ಅನಂತ ಸುಬ್ಬರಾವ್ ಸುದ್ದಿಗೋಷ್ಟಿ ನಡೆಸಿದ್ದು 'ಬೆಳಗ್ಗೆ ಮುಖ್ಯಂಮತ್ರಿಗಳು 20% ಕೆಪಿಟಿಸಿಎಲ್ ಗೆ ಕೊಟ್ಟಿದ್ದಾರೆ ಕೆಎಸ್ಆರ್ಟಿಸಿಗೆ 15% ಕೊಟ್ಟಿದ್ದಾರೆ. ನಾವು ಹೆಚ್ಚು ಕೇಳಿದ್ದೇವೆ. ನೂರಾರು ಜನರು ಸ್ಟ್ರೈಕ್ನಲ್ಲಿದ್ದಾರೆ ಅಂತ ಎಫ್ಐಆರ್ ಆಗಿದೆ. ಅವರನ್ನು ಕೆಲಸದಿಂದ ತೆಗೆಯಬಾರದು ಎಂದು ಬೇಡಿಕೆ ಇತ್ತು. ಆದ್ರೆ ಬೆಳಗ್ಗೆ 15% ಅಂತ ಬಂದಿರೋದು ನಿಜಕ್ಕೂ ಶಾಕಿಂಗ್.
ನಾಳೆ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. 2016 ರಲ್ಲೂ ಕೂಡಾ ಒಪ್ಪಂದ ಆಗಿ ನಂತರ ನೋಟಿಫಿಕೇಷನ್ ಬಂತು. ಈಗ ಚರ್ಚೆ ಆಗಿರಬೇಕಾದಾಗಲೇ ಈ ರೀತಿ ಮಾಡಿರೋದು ಸರಿಯಲ್ಲ. ಮುಖ್ಯಮಂತ್ರಿಗಳೇ ನಮಗೆ ಅಪಾಯಿಂಟ್ಮೆಂಟ್ ಕೊಡಿ. ಸರ್ಕಾರದ ಮಟ್ಟದಲ್ಲಿ ಏನಿದೆ ಅಂತ ಹೇಳಬಹುದು. ನಮ್ಮ ತೀರ್ಮಾನ ಯಥಾಸ್ಥಿತಿ ಇದೆ. ಮಾತುಕತೆ ಮುಂದುವರೆಯದೆ ಇದ್ದರೆ 21 ಕ್ಕೆ ಸ್ಟ್ರೈಕ್ ಮಾಡುತ್ತೇವೆ' ಎಂದಿದ್ದಾರೆ.