ರಾಣೆಬೆನ್ನೂರ: ಕೆಎಸ್ಆರ್ಟಿಸಿ ಬಸ್ ಚಾಲಕ ಸೇರಿ ಮೂವರು ಸಿಬ್ಬಂದಿ ಮೇಲೆ ಐದಾರು ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
ನಗರದ ಜಾಫರ್ ಅಬ್ದುಲ್ ಗನಿಖಾಜಿ ಹಾಗೂ ಈತನ ಸ್ನೇಹಿತರು ಹಲ್ಲೆ ನಡೆಸಿದ ಆರೋಪಿಗಳು.
ಘಟನೆಯಲ್ಲಿ ಬಸ್ ಚಾಲಕ ಈರನಗೌಡ ಶಿವನಗೌಡ ಪಾಟೀಲ ಹಾಗೂ ಸಿಬ್ಬಂದಿಯಾದ ಶಾಂತಪ್ಪ ದೊಡ್ಡಮನಿ, ಮಂಜಪ್ಪ ಹೊಸಳ್ಳಿ ಎಂಬುವರು ಗಾಯಗೊಂಡಿದ್ದಾರೆ.
ಆರೋಪಿತರು ನಗರದ ಬಸ್ ನಿಲ್ದಾಣದಲ್ಲಿ ಚಾಲಕ ಬಸ್ಅನ್ನು ಸೈಡ್ಗೆ ನಿಲ್ಲಿಸುತ್ತಿದ್ದ ಸಮಯದಲ್ಲಿ ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ. ಯಾಕೆ ಎಂದು ಪ್ರಶ್ನೆ ಮಾಡಿದಾಗ ಮತ್ತೇ ಚಾಲಕನನ್ನು ಕೆಳಗೆ ಎಳೆದು ಬಸ್ ನಿಲ್ದಾಣದಲ್ಲಿ ಓಡಾಡಿಸಿ ಹೊಡೆದಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಜಾಫರ್ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕರ್ತವ್ಯ ಅಡ್ಡಿ ಹಾಗೂ ಹಲ್ಲೆ ಕುರಿತು ಪ್ರಕರಣ ದಾಖಲಿಸಲಾಗಿದೆ.
ಭಯದ ವಾತಾವರಣ...
ಬಸ್ ನಿಲ್ದಾಣದಲ್ಲಿ ಚಾಲಕ ಹಾಗೂ ಸಿಬ್ಬಂದಿ ಮೇಲೆ ಯುವಕರ ಗುಂಪು ಮಾರಣಾಂತಿಕ ಹಲ್ಲೆ ಮಾಡಿರುವುದರಿಂದ ಭಯದ ವಾತಾವರಣ ನಿಮಾರ್ಣವಾಗಿದೆ. ಅಲ್ಲದೆ ಸೋಮವಾರ ಬೆಳಗ್ಗೆ ಆರೋಪಿಗಳನ್ನು ಬಂಧಿಸಬೇಕು. ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಬಸ್ನ ಚಾಲಕ ಹಾಗೂ ನಿರ್ವಾಹಕರಿಗೆ ಸೂಕ್ತ ರಕ್ಷಣೆ ಕೊಡಬೇಕು. ಅಲ್ಲಿಯವರೆಗೆ ಚಾಲಕರು ಬಸ್ ಚಲಾಯಿಸುವುದಿಲ್ಲ ಎಂದು ಪಟ್ಟುಹಿಡಿದ್ದರು. ಸ್ಥಳಕ್ಕೆ ಬಂದ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಎಸ್.ಎಂ. ದೊಡ್ಡಲಿಂಗನವರ ಮಾತನಾಡಿ, ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದ ಬಳಿಕ ಚಾಲಕರು ಬಸ್ಗಳು ಓಡಿಸಲು ಮುಂದಾದರು.