ಕ್ಯಾಪ್ಸೂಲ್‌ಗಳ ಸಾಗಾಟ, ಬ್ರೆಜಿಲ್ ಪ್ರಜೆಯ ಸೆರೆ೯.೨೦ ಕೋಟಿ ರೂ. ಮೌಲ್ಯದ ೯೧ ಕೋಕೇನ್ ವಶ

arrest
Published on

ಬೆಂಗಳೂರು: ಹೊಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕೋಕೇನ್ ಕ್ಯಾಪ್ಸೂಲ್‌ಗಳನ್ನು ಸಿನಿಮೀಯ ರೀತಿ ಸಾಗಾಟ ಮಾಡುತ್ತಿದ್ದ ಬ್ರೆಜಿಲ್ ಪ್ರಜೆಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ಹೊಟ್ಟೆಯಲ್ಲಿದ್ದ ೯.೨೦ ಕೋಟಿ ರೂ. ಮೌಲ್ಯದ ೯೧ ಕೋಕೇನ್ ಕ್ಯೂಪ್ಸೂಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಫೆ.೯ರಂದು ಮುಂಜಾನೆ ಬ್ರೆಜಿಲ್ ದೇಶದಿಂದ ದುಬೈ ಮಾರ್ಗವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನವೊಂದು ಬಂದಿತ್ತು. ಇದೇ ವೇಳೆ ಬ್ರೆಜಿಲ್‌ನಿಂದ ಅಕ್ರಮವಾಗಿ ಮಾದಕ ವಸ್ತು ಸಾಗಾಟವಾಗುತ್ತಿದೆ ಎಂಬ ಮಾಹಿತಿ ದೊರೆತ ಡಿಆರ್‌ಐ ಅಧಿಕಾರಿಗಳು, ನಿರ್ದಿಷ್ಟ ವಿಮಾನದ ಎಲ್ಲ ಪ್ರಯಾಣಿಕರನ್ನು ತಪಾಸಣೆಗೊಳಿಸಿದರು. ಆಗ ಭಾರತೀಯ ಪ್ರವಾಸಿ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ ಆರೋಪಿಯ ವರ್ತನೆ ಕಂಡು ಅನುಮಾನ ಬಂದಿದೆ. ಕೂಡಲೇ ಆತನ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಯಾವುದೇ ವಸ್ತುಗಳು ಕಂಡು ಬಂದಿಲ್ಲ.

ಆದರೆ. ಆತನ ದೇಹದಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು. ಬಳಿಕ ವಶಕ್ಕೆ ಪಡೆದುಕೊಂಡು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸ್ಕಾೃನಿಂಗ್ ಮಾಡಿಸಿದಾಗ ಹೊಟ್ಟೆಯೊಳಗೆ ಕ್ಯಾಪ್ಸೂಲ್‌ಗಳು ಇರುವುದು ಪತ್ತೆಯಾಗಿತ್ತು. ಆ ಕ್ಯಾಪ್ಸೂಲ್‌ಗಳನ್ನು ಹೊರ ತೆಗೆಯುವ ಸಲುವಾಗಿ ಆರೋಪಿಯನ್ನು ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಎರಡು ದಿನಗಳ ಹಿಂದೆ ಆತನ ದೇಹದಲ್ಲಿದ್ದ ೯೨೦ ಗ್ರಾಂ ತೂಕದ ೯೧ ಕೋಕೇನ್ ಕ್ಯಾಪ್ಸೂಲ್‌ಗಳನ್ನು ಹೊರ ತೆಗೆಯಲಾಗಿದೆ. ಸದ್ಯ ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಕೇಸ್ ದಾಖಲಿಸಿ, ಪರಪ್ಪನ ಅಗ್ರಹಾರ ಕಾರಾಗೃಹ ಜೈಲಿಗೆ ಕಳುಹಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net