ಸಾರಿಗೆ ಹೋರಾಟಕ್ಕೆ ಅಣಿ; ಜೈವಿಕ ವಿಕೋಪದಿಂದ ತತ್ತರಿಸಿದ ಉದ್ಯಮ

state-2
Published on

ಬೆಂಗಳೂರು: ಜೈವಿಕ ವಿಕೋಪದಿಂದ ರಾಜ್ಯದ ಸಾರಿಗೆ ಕ್ಷೇತ್ರ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ ದೊಡ್ಡ ಹೋರಾಟಕ್ಕಿಳಿಯಲು ಈ ಕ್ಷೇತ್ರ ವಿವಿಧ ಸಂಘಟನೆಗಳು ಮುಂದಾಗಿವೆ.

ಸಾರಿಗೆ ಕ್ಷೇತ್ರ ಕುಸಿದು ಕುಳಿತಿರುವ ಸಂದರ್ಭದಲ್ಲಿ ಸರ್ಕಾರ ಸ್ಪಂದನೆಯೇ ನೀಡದೇ ಹೋದರೆ ಹೇಗೆ ಎಂದು ಪ್ರಶ್ನೆ ಎತ್ತಿರುವ ಸಾರಿಗೆ ಸಂಘಟನೆಗಳು, ಇನ್ನು ಕಾಯುತ್ತಾ ಕೂರಲು ಸಾಧ್ಯವಿಲ್ಲ, ಹೋರಾಟವೇ ದಾರಿ ಎಂದು ನಿರ್ಧರಿಸಿವೆ.

ಜಿಲ್ಲಾ ಸಂಘಟನೆಗಳು ಸೇರಿಕೊಂಡಂತೆ ರಾಜ್ಯಮಟ್ಟದ ಸಭೆ ನಡೆಸಿ, ಅಲ್ಲಿಂದ ಹೋರಾಟಕ್ಕಿಳಿಯಲು ತೀರ್ವನಿಸಿದ್ದು. ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ ಶನಿವಾರ ಈ ಸಂಬಂಧ ಸಭೆಯನ್ನೂ ನಡೆಸಿದ್ದು, ತನ್ನ ಸದಸ್ಯರಿಗೆ ಸಂದೇಶ ಕಳಿಸಿದೆ.

ವಿಜಯವಾಣಿ ಈ ವಿಚಾರವಾಗಿ ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು. ವಿವಿಧ ಸಾರಿಗೆ ಸಂಘಟನೆಗಳು ಸರ್ಕಾರದ ಹಂತದಲ್ಲಿ ಮಾಡಿರುವ ಪ್ರಯತ್ನಗಳನ್ನು ವಿವರಿಸಿ ತೀರ್ವನಕ್ಕೆ ಕಾಯುತ್ತಿರುವುದಾಗಿ ಹೇಳಿದ್ದರು. ಆದರೆ, ಬೇರೆ ಬೇರೆ ರಾಜ್ಯಗಳು ತೆರಿಗೆ ವಿನಾಯಿತಿ ಘೋಷಿಸಿರುವಾಗ ಕರ್ನಾಟದಲ್ಲಿ ತಡವೇಕೆ, ನಮ್ಮಲ್ಲೂ ಜಾರಿ ಮಾಡಿ ಎಂದು ಒತ್ತಡ ತರಲು ಹೋರಾಟ ನಡೆಸುವುದು ಅನಿವಾರ್ಯ ಎಂಬ ತೀರ್ವನಕ್ಕೆ ಬಂದಿದ್ದಾರೆ.

ಕರೊನಾ ಲಾಕ್​ಡೌನ್ ಹಿನ್ನೆಲೆ ಬೇರೆ ಬೇರೆ ವರ್ಗದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವು ನೀಡಿವೆ. ಸಾಲಮನ್ನಾ, ರೈತರು, ನೇಕಾರರಿಗೆ ಪ್ಯಾಕೇಜ್, ಬಡವರಿಗೆ ಉಚಿತ ಪಡಿತರ, ಗ್ಯಾಸ್ ಸೇರಿ ಒಂದು ಬಾರಿಗೆ ಹಣಕಾಸು ನೆರವನ್ನೂ ನೀಡಿದೆ. ಸಾರಿಗೆ ಕ್ಷೇತ್ರದವರಿಗೆ ಮಾತ್ರ ಯಾವುದೇ ನೆರವು ಸಿಕ್ಕಿಲ್ಲ. ನಾವೇನು ಆರ್ಥಿಕ ಪ್ಯಾಕೇಜ್ ಕೇಳುತ್ತಿಲ್ಲ, ಬದಲಿಗೆ ಆರು ತಿಂಗಳ ತೆರಿಗೆ ವಿನಾಯಿತಿ, ಮುಂದಿನ ಕೆಲವು ತಿಂಗಳು ಭಾಗಶಃ ತೆರಿಗೆ ವಿನಾಯಿತಿ ಕೊಡಬೇಕೆಂಬುದು ನಮ್ಮ ಒತ್ತಾಯ ಎಂದು ಕೆಎಸ್​ಟಿಒಎ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ದೊಡ್ಡ ಮಟ್ಟದ ತಪು್ಪ ಮಾಡುತ್ತಿದೆ ಅನಿಸುತ್ತಿದೆ, ನಾವೆಷ್ಟೇ ಮನವಿಕೊಟ್ಟರೂ ಇಷ್ಟೊಂದು ನಿರ್ಲಕ್ಷ್ಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.

ಬೇರೆ ಬೇರೆ ಕ್ಷೇತ್ರದ ಪುನರ್ ನಿರ್ವಣಕ್ಕೆ ಸರ್ಕಾರ ಗಮನ ಹರಿಸಿದೆ. ಸಾರಿಗೆ ಕ್ಷೇತ್ರದ ಬಗ್ಗೆ ಮಾತ್ರ ಗಮನಿಸಿಲ್ಲ, ಉದಾಸೀನ ಧೋರಣೆ ತಾಳಿದೆ. ಹಲವಾರು ರಾಜ್ಯಗಳು ತೆರಿಗೆ ವಿನಾಯಿತಿ ಘೋಷಿಸಿರುವಾಗ ಕರ್ನಾಟಕದಲ್ಲಿ ಏಕಿಲ್ಲ ಎಂದು ಕೇಳುತ್ತಿದ್ದೇವೆ. ಕೂಡಲೇ ಸ್ಪಂದಿಸಲಿ ಎಂಬುದು ನಮ್ಮ ಆಗ್ರಹ ಎಂದು ವಿವಿಧ ಸಂಘಟನೆಗಳ ಒಕ್ಕೊರಲ ಆಗ್ರಹವಾಗಿದೆ.

ದರ ಇಳಿಸಲಿ: ದೆಹಲಿ ಸರ್ಕಾರ ಇಂಧನ ದರ ಇಳಿಕೆ ಮಾಡಿದೆ, ಆದರೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ಯನ್ನೂ ನೀಡದೇ, ಇಂಧನ ದರವೂ ದುಬಾರಿಯಾದರೆ ಈ ಕ್ಷೇತ್ರ ಉಳಿಯುವುದಾದರೂ ಹೇಗೆ ಎಂದು ಕ್ಯಾಬ್ ಸಂಘಟನೆಯವರ ಪ್ರಶ್ನೆಯಾಗಿದೆ. ಬೊಕ್ಕಸ ಭರ್ತಿ ಮಾಡಿಕೊಳ್ಳಲು ನಮಗೇಕೆ ಹೊರೆ, ಕೂಡಲೇ ಇಲ್ಲೂ ಸಹ ಇಂಧನ ದರ ಇಳಿಸಲಿ ಎಂದು ಆಗ್ರಹಿಸಿದ್ದಾರೆ.

ಕೂಗಿನ ಸಾರ:

  1. ಕಳೆದ 5-6 ತಿಂಗಳಿಂದ ವಾಹನ ರಸ್ತೆಗಿಳಿದಿಲ್ಲ. ವ್ಯವಹಾರ ನಷ್ಟಕ್ಕೆ ಜಾರಿದ
  2. ಈಗ ವಾಹನ ಓಡಾಟಕ್ಕೆ ಅವಕಾಶ ನೀಡಿದರೂ ಪ್ರಯಾಣಿಕರು, ಗ್ರಾಹಕರಿಲ್ಲ
  3. ತಾರಾ ಹೋಟೆಲ್, ಅಂತಾರಾಷ್ಟ್ರೀಯ ವಿಮಾನ ಓಡಾಟವಿಲ್ಲದೆ ವ್ಯವಹಾರವಿಲ್ಲ
  4. ಸಾಲದ ಮೊರಟೋರಿಯಂ ಅವಧಿ ಮುಕ್ತಾಯದ ಸಮಯ ಬರುತ್ತಿದೆ, ಕಂತುಕಟ್ಟಲು ಹಣವಿಲ್ಲ
  5. ಐಟಿ, ಬಹುರಾಷ್ಟ್ರೀಯ ಕಂಪನಿಗಳ
  6. ವರ್ಕ್​ಫ್ರಂ ಹೋಂ ಮುಂದುವರಿದಿದ್ದು, ಸದ್ಯ ಅವಕಾಶವಿಲ್ಲ
  7. 4-5 ವಾಹನ ಇಟ್ಟುಕೊಂಡವರು ವ್ಯವಹಾರವನ್ನೇ ಕೊನೆಗೊಳಿಸುವ ಹಂತ ತಲುಪಿದ್ದಾರೆ.

ಬೇರೆ ರಾಜ್ಯದಲ್ಲಿ ಮಾಡಿದ್ದೇನು?

  •  ಒಂದು ತಿಂಗಳ ಹಿಂದೆಯೇ ಗುಜರಾತ್ ಸರ್ಕಾರ ವಿನಾಯಿತಿ ಪ್ರಕಟಿಸಿತು.
  •  ಕೇರಳ 3 ತಿಂಗಳು ತೆರಿಗೆ ವಿನಾಯಿತಿ ಪ್ರಕಟಿಸಿದೆ.
  •  ಹರಿಯಾಣ, ಒರಿಸ್ಸಾ, ಉತ್ತರಪ್ರದೇಶದಲ್ಲೂ ರಿಯಾಯಿತಿ ಘೋಷಣೆಯಾಗಿದೆ.
  •  ಪ.ಬಂಗಾಳದಲ್ಲಿ ತೆರಿಗೆ ಸಂಗ್ರಹ ನಿಲ್ಲಿಸಲಾಗಿದೆ.
  •  ಮಹಾರಾಷ್ಟ್ರದಲ್ಲಿ ಆರು ತಿಂಗಳ ತೆರಿಗೆ ವಿನಾಯಿತಿ ಘೋಷಣೆಯಾಗಿದೆ.

ವಾಣಿಜ್ಯ ವಾಹನಗಳಿಗೆ ಡಿಸೆಂಬರ್ ತನಕ ತೆರಿಗೆ ವಿನಾಯ್ತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಸಾರಿಗೆ ಸಚಿವರು ಕೂಡಲೇ ಸಮಿತಿಯೊಂದನ್ನು ರಚನೆ ಮಾಡಬೇಕು ಹಾಗೂ ಸಭೆ ಕರೆದು ಚರ್ಚೆ ಮಾಡಬೇಕು. | ಜಿ.ಆರ್. ಷಣ್ಮುಖಪ್ಪ ಅಧ್ಯಕ್ಷ, ಕರ್ನಾಟಕ ಲಾರಿ ಮಾಲೀಕರ ಒಕ್ಕೂಟ ಡಿಸೆಂಬರ್​ವರೆಗೆ ತೆರಿಗೆ ವಿನಾಯಿತಿ ಕೇಳಿದ್ದೆವು. ಆದರೆ, ದಂಡ ರಹಿತ ತೆರಿಗೆ ಕಟ್ಟಲು ಆದೇಶ ಹೊರಡಿಸಿದೆ. ಸಾರಿಗೆ ಮಂತ್ರಿಗಳು ನಮ್ಮ ಕಷ್ಟಕ್ಕೆ ಕಿವಿಕೊಡುತ್ತಿಲ್ಲ. ಎಲ್ಲಾ ಸಂಘಟನೆಗಳ ಒಕ್ಕೂಟ ಸೇರಿ ಹೋರಾಟ ಮಾಡುತ್ತೇವೆ. | ಭೈರವ ಸಿದ್ದರಾಮು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ https://www.vijayavani.net/centre-annonced-unlock-4-guidelines/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net