ಜನನ ಪ್ರಮಾಣಪತ್ರದಲ್ಲಿ ಗೊಂದಲ: ವಿಶೇಷ ಮನವಿಯೊಂದಿಗೆ ಕೋರ್ಟ್​ ಮೆಟ್ಟಿಲೇರಿದ ತೃತೀಯಲಿಂಗಿ ದಂಪತಿ!

Trans Couple Kerala
Published on

ಕೊಚ್ಚಿ: ಮಗುವಿಗೆ ಜನ್ಮ ನೀಡುವ ಮೂಲಕ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಕೇರಳ ತೃತೀಯಲಿಂಗಿ ದಂಪತಿ ಇದೀಗ ಕೋರ್ಟ್​ ಮೆಟ್ಟಿಲೇರುವುದರೊಂದಿಗೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಪಾಲಕರ ಹೆಸರಿನ ವಿಚಾರವಾಗಿ ದಂಪತಿ ನ್ಯಾಯಾಲಯದ ಕದ ತಟ್ಟಿದ್ದಾರೆ.

ಜನನ ಪ್ರಮಾಣ ಪತ್ರದಲ್ಲಿ ತಂದೆ ಮತ್ತು ತಾಯಿ ಅಂತ ಉಲ್ಲೇಖಿಸದೇ ಕೇವಲ ಪಾಲಕರು ಎಂದು ನಮೂದಿಸಲು ಕೋಯಿಕ್ಕೋಡ್​ ಪಾಲಿಕಗೆ ನಿರ್ದೇಶನ ನೀಡುವಂತೆ ತೃತೀಯಲಿಂಗಿ ದಂಪತಿ ಕೇರಳ ಹೈಕೋರ್ಟ್​ ಮೊರೆ ಹೋಗಿದ್ದಾರೆ.

ಅರ್ಜಿಯನ್ನು ಹೆಣ್ಣಾಗಿ ಹುಟ್ಟಿ ಪುರುಷನಾಗಿ ಬದಲಾಗಿರುವ ಜಹಾದ್ ಮತ್ತು ಪುರುಷನಾಗಿ ಹುಟ್ಟಿ ಹೆಣ್ಣಾಗಿ ಬದುಕು ನಡೆಸುತ್ತಿರುವ ಜಿಯಾ ಪೊವೆಲ್​ ಸಲ್ಲಿಸಿದ್ದಾರೆ. ಇವರು ಭಾರತದ ಮೊದಲ ತೃತೀಯಲಿಂಗಿ ಪಾಲಕರಾಗಿದ್ದಾರೆ. ಫೆ. 8ರಂದು ಜಹಾದ್ ಕೋಯಿಕ್ಕೋಡ್​ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು.

ಪಾಲಕರೆಂದು ನಮೂದಿಸಿ

ಇದೀಗ ಕೋಯಿಕ್ಕೊಡ್​ ಪಾಲಿಕೆ, ಮಗುವಿನ ಜನನ ಪ್ರಮಾಣಪತ್ರದಲ್ಲಿ ಜಿಯಾ ಪೊವೆಲ್​ರನ್ನು ತಂದೆ ಮತ್ತು ಜಹಾದ್​ರನ್ನು ತಾಯಿ ಎಂದು ಹೆಸರಿಸಿದೆ. ಇದನ್ನು ವಿರೋಧಿಸಿರುವ ದಂಪತಿ ತಂದೆ-ತಾಯಿ ಎಂದು ಉಲ್ಲೇಖಿಸಿದೇ ಕೇವಲ ಪಾಲಕರು ಎಂಬುದನ್ನು ಮಾತ್ರ ಉಲ್ಲೇಖಿಸುವಂತೆ ನ್ಯಾಯಾಲಯದಲ್ಲಿ ಕೋರಿದ್ದಾರೆ.

ಪಾಲಿಕೆ ನಿರಾಕರಣೆ

ಮಗುವಿನ ಜೈವಿಕ ತಾಯಿಯಾಗಿರುವ ಜಹಾದ್​, ವರ್ಷಗಳ ಹಿಂದೆಯೇ ತನ್ನನ್ನು ಪುರುಷ ಎಂದು ಗುರುತಿಸಿಕೊಂಡಿದ್ದು, ಪ್ರಸ್ತುತ ಸಮಾಜದಲ್ಲಿ ಪುರುಷ ಸದಸ್ಯನಾಗಿಯೇ ಜೀವಿಸುತ್ತಿರುವುದರಿಂದ ಜನನ ಪ್ರಮಾಣಪತ್ರದಲ್ಲಿ ತಂದೆ ಮತ್ತು ತಾಯಿಯ ಹೆಸರನ್ನು ತಪ್ಪಿಸುವಂತೆ ಪಾಲಿಕೆಗೆ ಮನವಿ ಮಾಡಿದ್ದರು. ಆದರೆ, ಪಾಲಿಕೆ ಅವರನ್ನು ಪಾಲಕರು ಎಂದು ಉಲ್ಲೇಖಿಸಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ದಂಪತಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ಮುಂದಿನ ವಾರ ವಿಚಾರಣೆ

ನ್ಯಾಯಮೂರ್ತಿ ಎನ್​. ನಗರೇಶ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿದಾರರ ಕುಂದುಕೊರತೆಯನ್ನು ಪರಿಹರಿಸುವಂತೆ ರಾಜ್ಯ ಸರ್ಕಾರದ ವಕೀಲರಿಗೆ ಸೂಚನೆ ನೀಡಿದ್ದಾರೆ. ಅರ್ಜಿಯಲ್ಲಿನ ಕೆಲವು ತಾಂತ್ರಿಕ ದೋಷಗಳನ್ನು ರಾಜ್ಯದ ವಕೀಲರು ಗುರುತಿಸಿದ ಬಳಿಕ ನ್ಯಾಯಾಲಯವು ಮುಂದಿನ ಗುರುವಾರಕ್ಕೆ ಪ್ರಕರಣವನ್ನು ಮುಂದೂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net