

ಎನ್.ಎಲ್. ಶಿವಮಾದು
ಬೆಂಗಳೂರು: ಇನ್ನೊಂದು ವಾರದಲ್ಲಿ (ಜು.18) ವರ್ಗಾವಣೆ ನಡೆಯಲಿದೆ. ಅದಾದ ಒಂದು ವಾರದಲ್ಲಿ (ಜು.24) ಸ್ಥಳ ನಿಯುಕ್ತಿಯಾಗಿ ತಾವು ಕೇಳಿದ ಶಾಲೆಗೆ ವರ್ಗಾವಣೆಯಾಗಬಹುದು ಎಂದು ತುದಿಗಾಲಲ್ಲಿ ನಿಂತಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆಯು ಶಾಕ್ ನೀಡಿದೆ.
- ಹೌದು, ರಾಜ್ಯದಲ್ಲಿ ಹೊಸದಾಗಿ 4,134 ದ್ವಿಭಾಷಾ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಿರುವ ಕಾರಣ ಹಾಗೂ 5 ಸಾವಿರ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಾದ (ಎಲ್‌ಕೆಜಿ, ಯುಕಿಜಿ) ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ಆರಂಭಿಸಲಾಗಿದೆ. ಈ ಶಾಲೆಗಳಿಗೆ ಮೊದಲ ಆದ್ಯತೆ ನೀಡಿ ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಮೊದಲ ಆದ್ಯತೆ ನೀಡಿದೆ.
ಈ ಹಿನ್ನೆಲೆಯಲ್ಲಿ 2024-25ನೇ ಸಾಮಾನ್ಯ ವರ್ಗಾವಣೆ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತಿದೆ. ಸದ್ಯದಲ್ಲಿಯೇ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜೂ.19ರಂದು ಹೊರಡಿಸಿದ್ದ ಪರಿಷ್ಕೃತ ವೇಳಾಪಟ್ಟಿಯನ್ನು ರದ್ದುಪಡಿಸಲಾಗಿದೆ.
ಯಾಕಾಗಿ ಈ ಕ್ರಮ?
ಪೂರ್ವಪ್ರಾಥಮಿಕ ತರಗತಿಗಳಲ್ಲಿ ಕಲಿಕೆ ಮತ್ತು ದ್ವಿಭಾಷಾ ಮಾಧ್ಯಮ ತರಗತಿಗಳಲ್ಲಿ ಮೊದಲ ಆದ್ಯತೆಯಾಗಿ ಶಿಕ್ಷಕರನ್ನು ನೀಡಬೇಕಿದೆ. ಆದರೆ, ಈಗಿರುವ ವರ್ಗಾವಣೆ ಪಟ್ಟಿಯನ್ನು ಕಳೆದ ಡಿಸೆಂಬರ್ ವೇಳೆಗೆ ಲಭ್ಯವಾಗುವ ಶಿಕ್ಷಕರು ಮತ್ತು ಅವರ ಸೇವಾ ಅಂಕ (ವೇಯ್ಟೇಜ್ ಮಾರ್ಕ್ಸ್) ಆಧಾರದಲ್ಲಿ ವರ್ಗಾವಣೆ ಪಟ್ಟಿಯನ್ನು ತಯಾರಿಸಲಾಗಿತ್ತು. ಹೊಸ ಪಟ್ಟಿಯಲ್ಲಿ ಜುಲೈ 31ರವರೆಗೆ ಲಭ್ಯವಾಗುವ ಶಿಕ್ಷಕರು ಮತ್ತು ವಲಯವಾರು ಸೇವಾ ಅಂಕಗಳನ್ನು ಪರಿಗಣಿಸಿ ಹೊಸ ಪಟ್ಟಿಯನ್ನು ಪರಿಗಣಿಸಲಾಗುತ್ತದೆ. ಇದರಿಂದ ಕಳೆದ 6 ತಿಂಗಳಲ್ಲಿ ನಿವೃತ್ತರಾಗಿರುವ ಶಿಕ್ಷಕರ ಸಂಖ್ಯೆ ತಿಳಿಯಲಾಗುತ್ತದೆ. ಹೊಸ ಪಟ್ಟಿಯಿಂದ ಹೆಚ್ಚುವರಿ ಪಟ್ಟಿ ನೀಡಲು ಅನುಕೂಲವಾಗಲಿದೆ.
ಮರು ಹಂಚಿಕೆ ವರ್ಗಾವಣೆ:
ಈ ಬಾರಿ ಮರು ಹಂಚಿಕೆ ವರ್ಗಾವಣೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಇಇಡಿಎಸ್ ದತ್ತಾಂಶ, ಖಾಲಿ ಹುದ್ದೆಗಳ ಮಾಹಿತಿ, ಶಾಲಾ ವಲಯಗಳ ದತ್ತಾಂಶದ ಆಧಾರದ ಮೇಲೆ ವರ್ಗಾವಣೆ ನಡೆಸಲಿದೆ. ಸಾಮಾನ್ಯ, ಪರಸ್ಪರ ವರ್ಗಾವಣೆಗಳನ್ನು ಒಳಗೊಂಡಂತೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಬೇಕಾಗಿದ್ದು, ಹೊಸದಾಗಿ ಶಿಕ್ಷಕರ ಅಂಕಗಳನ್ನು ಸಂಗ್ರಹಿಸಲಿದೆ.
ಪ್ರಸ್ತುತ ಹೊರಡಿಸಿರುವ ವರ್ಗಾವಣೆ ವೇಳಾಪಟ್ಟಿ ಪ್ರಕಾರ ಜು.18ರಿಂದ 23ರ ವರೆಗೆ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್, ಜು.24ರಂದು ಸ್ಥಳ ನಿಯುಕ್ತಿ, ಜು.28ರಂದು ವೀಭಾಗೀಯ ವರ್ಗಾವಣೆ ಕೌನ್ಸೆಲಿಂಗ್, ಆ.12ರಿಂದ 16ರ ವರೆಗೆ ಅಂತರ್ ವೀಭಾಗೀಯ ವರ್ಗಾವಣೆ ಕೌನ್ಸೆಲಿಂಗ್ ನಡೆಯಬೇಕಿತ್ತು.
ವರ್ಗಾವಣೆ ವಿಚಾರದಲ್ಲಿ ಶಿಕ್ಷಕರ ದಾರಿ ತಪ್ಪಿಸಬೇಡಿ
ವರ್ಗಾವಣೆ ಮತ್ತು ಹೆಚ್ಚುವರಿ ಪಟ್ಟಿಯ ವಿಚಾರದಲ್ಲಿ ಇನ್ನು ಅಂತಿಮ ನಿರ್ಧಾರ ಮಾಡಿಲ್ಲ. ವಿಶೇಷ ಶಿಕ್ಷಕರನ್ನು ಹೇಗೆ ನಿಯೋಜಿಸಬೇಕು ಎಂದು ಅಂತಿಮ ಆದೇಶ ಹೊರಡಿಸಿಲ್ಲ. ಆದರೆ, ಕೆಲವು ಶಿಕ್ಷಕ ಸಂಘಟನೆಗಳು ಹಾಗೂ ಮಾಧ್ಯಮಗಳು ತಮ್ಮದೇ ಆದ ಆಯಾಮದಲ್ಲಿ ಸುದ್ದಿಯನ್ನು ಪ್ರಕಟಿಸುತ್ತಿವೆ. ಇದರಿಂದ ಶಿಕ್ಷಕರು ಆತಂಕಗೊಂಡಿದ್ದಾರೆ. ಇಲಾಖೆ ಆದೇಶ ಪ್ರಕಟವಾಗುವ ತನಕ ಶಿಕ್ಷಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಇಲಾಖೆ ಅಧಿಕಾರಿಯೊಬ್ಬರು ಮನವಿ ಮಾಡಿದ್ದಾರೆ.