ಅಮಾನತಾದ ಪಿಡಿಒಗಳಿಗೆ ವರ್ಗಾವಣೆ ಭಾಗ್ಯ: ಛಲವಾದಿ ವ್ಯಂಗ್ಯ

Chalavadi Narayana swamy
Published on

ಬೆಂಗಳೂರು: ಭ್ರಷ್ಟಾಚಾರ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಂಡ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮವಹಿಸುವ ಬದಲು, ಅಮಾನತು ತೆರವುಗೊಳಿಸಿ ವರ್ಗಾವಣೆ ಭಾಗ್ಯ ಕಲ್ಪಿಸಲಾಗಿದೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ವ್ಯಂಗ್ಯವಾಗಿ ಆಕ್ಷೇಪಿಸಿದ್ದಾರೆ.

ಪಂಚಾಯತ್‌ರಾಜ್ ಆಯುಕ್ತಾಲಯದ ನಿರ್ದೇಶಕ (ಆಡಳಿತ-2) ಹೊರಡಿಸಿದ ಅಧಿಕೃತ ಜ್ಞಾಪನದ ಪ್ರತಿಯೊಂದಿಗೆ ಛಲವಾದಿ ನಾರಾಯಣಸ್ವಾಮಿಯವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಪಂಚಾಯತ್‌ರಾಜ್ ಆಯುಕ್ತಾಲಯ ನ.5ರಂದು ಹೊರಡಿಸಿರುವ ಅಧಿಕೃತ ಜ್ಞಾಪನ ಪ್ರಕಾರ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಅಮಾನತಿನಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಸೇರಿದ ಪಿಡಿಒ ಸೇರಿ 23 ನೌಕರರ ವಿರುದ್ಧ ಇಲಾಖಾ ವಿಚಾರಣೆ ಬಾಕಿಯಿರಿಸಲಾಗಿದೆ.

ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ತೆರವುಗೊಳಿಸಿ ಪಿಡಿಒ ಹಾಗೂ ಗ್ರೇಡ್-1 ಕಾರ್ಯದರ್ಶಿಗಳನ್ನು ಯಾದಗಿರಿ ಜಿಲ್ಲೆಯ ವಿವಿಧ ಗ್ರಾ.ಪಂ.ಗಳಿಗೆ ವರ್ಗಾಯಿಸಲಾಗಿದೆ.

ಭ್ರಷ್ಟಾಚಾರದಲ್ಲಿ ಪಾಲು ಎಷ್ಟು ?

ಭ್ರಷ್ಟಾಚಾರ ಆರೋಪದಡಿ ಅಮಾನತಾದ ಪಿಡಿಒ, ನೌಕರರ ವಿರುದ್ಧ ಕಾನೂನು ಕ್ರಮಕೈಗೊಳ್ಳದೇ ಯಾದಗಿರಿ ಜಿಲ್ಲೆಗೆ ವರ್ಗಾಯಿಸಲಾಗಿದೆ. ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವಂತಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಭ್ರಷ್ಟಾಚಾರಿಗಳ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕ್ರಮಕೈಗೊಳ್ಳುವ ಬದಲು ಅವರ ಭ್ರಷ್ಟಾಚಾರ ಕೃತ್ಯವನ್ನು ಮರೆಮಾಚುವ ನಿಟ್ಟಿನಲ್ಲಿ ಮಾಡಿದ ವರ್ಗಾವಣೆ, ಸಿದ್ದರಾಮಯ್ಯ ಸರ್ಕಾರದ ನಿಲುವಿನ ಮೇಲೆ ಸಂಶಯ ಹುಟ್ಟಿಸುತ್ತಿದೆ.

ಅಮಾನತುಗೊಂಡ ಭ್ರಷ್ಟಾಚಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾವಣೆಗೊಳಿಸಲು ಯಾರ ಬಳಿ ‘್ಯಾಕ್ಟ್ ಚೆಕ್’ ಮಾಡಿಸಿದ್ದೀರಿ. ಈ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲೆಷ್ಟು ? ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಪ್ರಶ್ನಿಸಿದ್ದಾರೆ.

ಸಾಮಾನ್ಯ ಜನರಿಗೆ ನ್ಯಾಯ ಸಿಗಬೇಕಾದರೆ, ಭ್ರಷ್ಟ ಅಧಿಕಾರಿಗಳನ್ನು ಕಠಿಣ ಶಿಕಷೆಗೆ ಒಳಪಡಿಸುವುದು ಮುಖ್ಯ. ಆದರೆ ಸರ್ಕಾರವೇ ಇಂತಹ ಆಪಾದಿತ ಅಧಿಕಾರಿಗಳ ರಕ್ಷಣೆ, ಭ್ರಷ್ಟಾಚಾರಕ್ಕೆ ಖುದ್ದು ಪ್ರೋತ್ಸಾಸ ನೀಡಿದಂತಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net