ತರಬೇತಿ ಗುತ್ತಿಗೆ ಅವ್ಯವಹಾರ: ಎನ್.ಮಹೇಶ್ | Lokayukta investigation urge

N Mahesh press meet
Published on

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಹೊಣೆಯನ್ನು ಅನರ್ಹ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಎನ್.ಮಹೇಶ್ ಆರೋಪಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪರೀಕ್ಷಾ ತರಬೇತಿಗಾಗಿ ಸಮಾಜ ಕಲ್ಯಾಣ ಇಲಾಖೆ ನಿಗದಿಪಡಿಸಿರುವ 112.87 ಕೋಟಿ ರೂ. ಅನುದಾನದಲ್ಲಿ ಪೂರ್ಣ ಅವ್ಯವಹಾರವಾಗಿದ್ದು, ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಈ ವರ್ಷ ಪೊಲೀಸ್ ಪೇದೆ, ಎಸ್‌ಐ ನೇಮಕಾತಿ ನಡೆಯುತ್ತಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳು ತಯಾರಾಗಲು ನುರಿತ ಸಂಸ್ಥೆಗೆ ತರಬೇತಿ ಕಾರ್ಯಾದೇಶ ನೀಡಬೇಕಾಗಿತ್ತು. ಆದರೆ ಟೆಂಡರ್ ಕರೆದು, ಎಲ್1 ಕಾರಣವೊಡ್ಡಿ ಕಡಿಮೆ ಗುಣಮಟ್ಟದ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿದ್ದಾರೆ ಎಂದು ದೂರಿದರು.

ಷರತ್ತುಗಳ ಉಲ್ಲಂಘನೆ

ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ಅಭ್ಯರ್ಥಿಗಳಿಗೆ ಪರೀಕ್ಷಾ ತರಬೇತಿ ನೀಡಲೆಂದು ವಿಜಯಪುರದ ಎರಡು ಸಂಸ್ಥೆಗಳಿಗೆ ಒಟ್ಟು 40 ಕೋಟಿ ರೂ. ಮೊತ್ತದ ಟೆಂಡರ್‌ನ್ನು ಸಮಾಜ ಕಲ್ಯಾಣ ಇಲಾಖೆ ನೀಡಿದೆ.

ಟೆಂಡರ್‌ನಲ್ಲಿ ವಿಧಿಸಿದ ಷರತ್ತಿನ ಪ್ರಕಾರ ಐದು ವರ್ಷಗಳ ತರಬೇತಿ ಅನುಭವ, ವಾರ್ಷಿಕ ಒಂಭತ್ತು ಕೋಟಿ ರೂ. ವಹಿವಾಟು ಹೊಂದಿರಬೇಕು. ಆದರೆ ಎಸ್.ವಿ.ವಿಸ್ಡಮ್ ಅಕಾಡೆಮಿಗೆ ಎರಡು ವರ್ಷಗಳ ಅನುಭವವಿದ್ದು, ಒಂಭತ್ತು ಕೋಟಿ ರೂ. ವಹಿವಾಟು ನಡೆಸಿಲ್ಲ.

ಇಲಾಖೆಯ 2024-25ನೇ ಸಾಲಿನ ಈ ಪ್ರಕ್ರಿಯೆಯಲ್ಲಿ ಅವ್ಯವಹಾರವಾಗಿದ್ದು, ತನಿಖೆ ನಡೆಸಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯವಿದೆ. ಟೆಂಡರ್‌ನಲ್ಲಿ ಎಲ್1 ಎಂದು ನಮೂದಿಸಿರುವುದು ಹಾಸ್ಯಾಸ್ಪದವೆಂದರು.

ಕಟ್ಟಡ, ರಸ್ತೆ ಮತ್ತಿತರ ಭೌತಿಕ ನಿರ್ಮಾಣದ ಕಾಮಗಾರಿಗಳಲ್ಲ. ಅರ್ಹ ಅಭ್ಯರ್ಥಿಗಳ ಬೌದ್ಧಿಕ ಶಕ್ತಿ, ಮನೋಬಲ ಹೆಚ್ಚಿಸುವಂತಹ ತರಬೇತಿಗೆ ಎಲ್1 ಮಾನದಂಡ ವಿಧಿಸಲಾಗಿದೆ ಎಂದು ದೂರಿದರು.

ಪರೀಕ್ಷಾ ಪೂರ್ವ ತರಬೇತಿಯನ್ನು ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರವೆಂದು ಸಿದ್ದರಾಮಯ್ಯ ನಾಮಕರಣ ಮಾಡಿದ್ದಾರೆ. ಡಾ..ಬಿ.ಆರ್.ಅಂಬೇಡ್ಕರ್ ಬಗ್ಗೆ ಕಾಳಜಿಯಿದ್ದಿದ್ದರೆ ಅದೇ ಹೆಸರು ಈ ಕೇಂದ್ರಕ್ಕೆ ನಾಮಕರಣ ಮಾಡುತ್ತಿದ್ದರು. ಆದರೆ ರಾಹುಲ್ ಗಾಂಧಿ ಮೆಚ್ಚಿಸಲು ಇಂದಿರಾಗಾಂಧಿ ಹೆಸರಿಟ್ಟಿದ್ದಾರೆ ಎಂದು ಟೀಕಿಸಿದರು.

ಕೌಶಲ್ಯದ ಔಚಿತ್ಯವೇನು ?

ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ. ಕೌಶಲ ಅಭಿವೃದ್ಧಿಗೆ ಪ್ರತ್ಯೇಕ ಇಲಾಖೆಯಿದ್ದರೂ ತರಬೇತಿ ಕೇಂದ್ರದಲ್ಲಿ ಡ್ರೋನ್ ತರಬೇತಿ, ಡ್ರೋನ್ ಜಾಹೀರಾತು, ಸಾಮಾಜಿಕ ಜಾಲತಾಣ ಸಹಾಯವಾಣಿ, ಸಿಟಿಜನ್ ಮೀಡಿಯಾ ಕಾರ್ಯಾಗಾರ ಇತ್ಯಾದಿಗಳನ್ನು ನಡೆಸಲು ಟೆಂಡರ್ ಕೊಟ್ಟಿರುವ ಔಚಿತ್ಯವೇನು ? ಎಂದು ಪ್ರಶ್ನಿಸಿದರು.

ಎಲ್1 ವ್ಯವಸ್ಥೆ, ಕೊಟ್ಟಿರುವ ಟೆಂಡರ್ ರದ್ದುಪಡಿಸುವ ಜತೆಗೆ ಇಲಾಖೆಯ 112 ಕೋಟಿ ರೂ.ಗಳ ದುರ್ಬಳಕೆಯನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಎನ್.ಮಹೇಶ್ ಆಗ್ರಹಿಸಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್, ವಕ್ತಾರ ಡಾ.ನರೇಂದ್ರ ರಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net