

ಶಿಕಾರಿಪುರ: ಸಾಂಪ್ರದಾಯಿಕ ಪದ್ಧತಿ ಜತೆಗೆ ಆಧುನಿಕ ಮತ್ತು ವೈಜ್ಞಾನಿಕ ಕೃಷಿಯ ಉತ್ತೇಜನಕ್ಕಾಗಿ ರೈತ ಸಂಘದಿಂದ ಮೇ 31, ಜೂ.1 ಮತ್ತು 2ರಂದು ಶಿರಾಳಕೊಪ್ಪ ಸಮೀಪದ ತಡಗಣಿ ಶ್ರೀ ಅಕ್ಕಮಹಾದೇವಿ ವಸತಿ ಶಾಲೆಯಲ್ಲಿ ರೈತರ ಮಕ್ಕಳಿಗೆ ರಾಜ್ಯ ಮಟ್ಟದ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದು ರೈತ ಸಂಘದ ಪ್ರಾಂತ್ಯ ವರಿಷ್ಠ ಕೆ.ಟಿ.ಗಂಗಾಧರ್ ಹೇಳಿದರು.
ಶಿಬಿರದಲ್ಲಿ 20 ಜಿಲ್ಲೆಗಳಿಂದ ಸುಮಾರು ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಗಮಿಸಲಿದ್ದಾರೆ. ರೈತರ ಕಷ್ಟ-ನಷ್ಟಗಳ ಕುರಿತು ಚರ್ಚಿಸಲಾಗುವುದು. ಸ್ಥಳೀಯ ಸಂಪನ್ಮೂಲ, ಸಾವಯವ ಗೊಬ್ಬರ, ದೇಸಿ ತಳಿಯ ಬಿತ್ತನೆ ಬೀಜಗಳನ್ನು ಬಳಸಿಕೊಂಡು ಉತ್ತಮ ಬೆಳೆ ತೆಗೆಯುವ ಬಗ್ಗೆ ಖ್ಯಾತ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ, ಕೃಷಿ ಕುಟುಂಬದ ಯುವಕರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಭಾರತ ಅಕ್ಷರಶಃ ಕೃಷಿ ಪ್ರಧಾನ ದೇಶ. ಆದರೆ ಯುವಜನರು ಕೃಷಿ ಕ್ಷೇತ್ರವನ್ನು ಉಪೇಕ್ಷೆ ಮಾಡುತ್ತಿರುವುದು ಬೇಸರದ ಸಂಗತಿ. ಈ ಕಾರಣಕ್ಕೆ ಶಿಬಿರ ಆಯೋಜಿಸಲಾಗಿದೆ. ರಾಜ್ಯ ವರಿಷ್ಠರಾದ ಚುಕ್ಕಿ ನಂಜುಂಡಸ್ವಾಮಿ, ಚಾಮರಸ ಮಾಲಿ ಪಾಟೀಲ್, ನಳಿನಿ ಗೌಡ, ರಾಮಣ್ಣ ಕೆಂಚಳ್ಳಿ, ಮಲ್ಲಿಕಾರ್ಜುನ ಬಳ್ಳಾರಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ವಾತಂತ್ರಾೃನಂತರ ಪಂಚವಾರ್ಷಿಕ ಯೋಜನೆಗಳಿಂದ ಕೃಷಿ ಉತ್ತೇಜಿಸುವ ಪೂರಕ ಯೋಜನೆಗಳು ನಡೆದವು. ಆದರೆ 1992ರಲ್ಲಿ ಭಾರತದ ಕೃಷಿಯನ್ನು ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸೇರಿಸಿದ ಮೇಲೆ ಈ ಯೋಜನೆ ರೈತರಿಗೆ ವರದಾನವಾಗಲಿಲ್ಲ. ಇದೊಂದು ಮಾರಕವಾಗಿ ಪರಿಣಮಿಸಿತು. ಕೃಷಿ ಈಗ ಸರ್ಕಾರಗಳ ಪಾಲಿಗೆ ಉಪೇಕ್ಷಿತ ಉದ್ಯಮ. ಚುನಾವಣೆಗಾಗಿ ರೈತರನ್ನು ಬಳಸಿಕೊಳ್ಳುವ ಜನಪ್ರತಿನಿಧಿಗಳಿಗೆ ಚುನಾವಣಾ ನಂತರ ರೈತರ ಸಂಕಷ್ಟಗಳು ಅರ್ಥವಾಗುವದಿಲ್ಲ.
ರೈತ ಸಂಘದ ಜಿಲ್ಲಾಧ್ಯಕ್ಷ ಹಾಲಪ್ಪ ಗೌಡ, ಕಾರ್ಯಾಧ್ಯಕ್ಷ ಪುಟ್ಟನ ಗೌಡ, ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ತಾಲೂಕು ಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಹೊಸಮನಿ ರಾಜು, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಬಾಪಟ್ ಇತರರಿದ್ದರು.