ವಿಮಾನಕ್ಕೇ ಕಾಂಪಿಟೇಶನ್​ ಕೊಡುತ್ತೆ ಈ ರೈಲು! ಒಂದೇ ಗಂಟೆಯಲ್ಲಿ 620 ಕಿಮೀ ಪ್ರಯಾಣ

train
Published on

ಬೀಜಿಂಗ್​: ತಾಂತ್ರಿಕವಾಗಿ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಚೀನಾ ಇದೀಗ ಅತಿ ವೇಗದ ರೈಲೊಂದನ್ನು ತಯಾರಿಸಿದೆ. ಹೊಸದಾಗಿ ಸಿದ್ಧವಾಗಿರುವ ಈ ರೈಲು ಒಂದೇ ಗಂಟೆಯಲ್ಲಿ ಬರೋಬ್ಬರಿ 620 ಕಿಮೀ ಚಲಿಸುತ್ತದೆಯಂತೆ.

"ಸೂಪರ್ ಬುಲೆಟ್ ಮ್ಯಾಗ್ಲೆವ್ ರೈಲು" ಎಂದು ಈ ಫಾಸ್ಟೆಸ್ಟ್​ ರೈಲನ್ನು ಕರೆಯಲಾಗಿದೆ. ಸದ್ಯ ಅಭಿವೃದ್ಧಿ ಹಂತದಲ್ಲಿರುವ ರೈಲಿನ ಮೊದಲ ಪ್ರೋಟೋಕಾಲ್​ನ್ನು ಇತ್ತೀಚೆಗೆ ಸಿಚುವಾನ್ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡೂನಲ್ಲಿ ಪ್ರದರ್ಶಿಸಲಾಯಿತು. ಈ ಹಿಂದೆ 2016ರಲ್ಲಿ ಚೀನಾ ಮ್ಯಾಗ್ಲೆವ್​ ರೈಲನ್ನು ಗಂಟೆಗೆ 600 ಕಿಮೀ ಚಲಿಸುವಂತೆ ಅಭಿವೃದ್ಧಿ ಪಡಿಸಿತ್ತು. ಅದಾದ ನಂತರ ಇದೀಗ ಆ ದಾಖಲೆಯನ್ನು ಸೂಪರ್​ ಬುಲೆಟ್​ ಮ್ಯಾಗ್ಲೆವ್​ ರೈಲು ಮುರಿದಿದೆ.

ವಿಮಾನಗಳು ಗಂಟೆಗೆ 900 ಕಿಮೀ ವೇಗದಲ್ಲಿ ಚಲಿಸುತ್ತವೆ. ಸದ್ಯ ಭೂಮಿ ಮೇಲೆ ಅತಿ ವೇಗವಾಗಿ ಚಲಿಸುವ ರೈಲುಗಳಲ್ಲಿ ಈ ಸೂಪರ್ ಬುಲೆಟ್ ಮ್ಯಾಗ್ಲೆವ್ ರೈಲು ಮೊದಲು ನಿಂತಿದೆ. ಅದೇ ಕಾರಣದಿಂದಾಗಿ ಇದಕ್ಕೆ ಫ್ಲೋಟಿಂಗ್​ ಟ್ರೈನ್​ ಎನ್ನುವ ಹೆಸರೂ ಇದೆ. ವಿಮಾನದ ಬದಲು ಈ ರೈಲಲ್ಲಿ ಪ್ರಯಾಣಿಸಬಹುದು ಎನ್ನಲಾಗಿದೆ.

ಈ ರೈಲಿನಲ್ಲಿ ಹೈ ಟೆಂಪರೇಚರ್​​ ಸೂಪರ್ ಕಂಡಕ್ಟಿಂಗ್​ ಮ್ಯಾಗ್ಲೆವ್​ ಟೆಕ್ನಾಲಜಿಯನ್ನು ಬಳಸಿರುವುದಾಗಿ ಚೀನಾ ಹೇಳಿಕೊಂಡಿದೆ. ಸಾಮಾನ್ಯ ಮ್ಯಾಗ್ಲೆವ್​ ರೈಲುಗಳಲ್ಲಿ ಲೋ ಟೆಂಪರೇಚರ್​ ಮ್ಯಾಗ್ಲೆವ್​ ಟೆಕ್ನಾಲಜಿ ಬಳಸಲಾಗುತ್ತದೆ. ಆದರೆ ಇದರಲ್ಲಿ ಅದನ್ನು ಬದಲಾಯಿಸಿರುವುದರಿಂದಾಗಿ ವೇಗ ಹೆಚ್ಚಿಸಲು ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net