

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಉತ್ತರಖಂಡದ ತನಕ್ಪುರ ಜಿಲ್ಲೆಗೆ ತೆರಳುತ್ತಿದ್ದ ರೈಲೊಂದು ತಾಂತ್ರಿಕ ತೊಂದರೆಯಿಂದಾಗಿ ಸುಮಾರು 35 ಕಿ.ಮೀ ಹಿಮ್ಮುಖವಾಗಿ ಚಲಿಸಿದ ಘಟನೆ ನಡೆದಿದೆ. ಕೊನೆಗೂ ರೈಲನ್ನು ದೆಹಲಿಯಿಂದ ಸುಮಾರು 300 ಕಿ.ಮೀ ದೂರವಿರುವ ಉತ್ತರಖಂಡದ ಖತಿಮಾ ಎಂಬಲ್ಲಿ ತಡೆದು ನಿಲ್ಲಿಸಲಾಗಿದೆ.
ವರದಿಗಳ ಪ್ರಕಾರ ಪುರ್ನಗಿರಿ ಜನ್ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಚಾಲಕ, ಹಳಿಯ ಮೇಲೆ ನಿಂತಿದ್ದ ಪ್ರಾಣಿಗಳಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ದಿಢೀರ್ ಬ್ರೇಕ್ ಹಾಕಿದ್ದಾರೆ. ಇದಾದ ಬಳಿಕ, ಚಾಲಕ ಲೊಕೊಮೋಟಿವ್ ನಿಯಂತ್ರಣ ಕಳೆದುಕೊಂಡ ಪರಿಣಾಮ ಇಡೀ ರೈಲು ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ.
ಸುಮಾರು 35 ಕಿ.ಮೀಗಳ ವರೆಗೆ ವೇಗವಾಗೇ ರೈಲು ಹಿಮ್ಮುಖವಾಗಿ ಚಲಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ಟ್ರೈನ್ ಎಲ್ಲಿಯೂ ಹಳಿ ತಪ್ಪಲಿಲ್ಲ. ಕೊನೆಗೆ ಟ್ರೈನ್ ಅನ್ನು ಖತಿಮಾದಲ್ಲಿ ನಿಲ್ಲಿಸಲಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ ಬಸ್ ಮುಖಾಂತರ ತನಕ್ಪುರ ಜಿಲ್ಲೆಗೆ ಕಳುಹಿಸಿಕೊಡಲಾಯಿತು.
ಉತ್ತರ ಪ್ರದೇಶದ ಪಿಲಿಭಿತ್ ತಾಂತ್ರಿಕ ತಂಡ ಘಟನೆ ಸಂಬಂಧ ತನಿಖೆ ನಡೆಸಲು ಖತಿಮಾಗೆ ತೆರಳಿದೆ. ಅಲ್ಲದೆ, ಲೊಕೋ ಪೈಲಟ್ ಮತ್ತು ಗಾರ್ಡ್ ಅನ್ನು ಈಶಾನ್ಯ ರೈಲ್ವೆ ಅಮಾನತ್ತು ಮಾಡಿದೆ. (ಏಜೆನ್ಸೀಸ್)