3 ವರ್ಷದ ಬಾಲಕಿಯನ್ನು ಅಪಹರಿಸಿದವ ಪಾರಾಗಲು ರೈಲು ಹತ್ತಿದ...ಆದರೆ ಅಲ್ಲೇ ಕಾದಿತ್ತು ಬಿಗ್​ ಶಾಕ್​ !

Train
Published on

ಭೋಪಾಲ್​: ಮೂರು ವರ್ಷದ ಬಾಲಕಿಯನ್ನು ಅಪಹರಿಸಿದ ವ್ಯಕ್ತಿ ರೈಲಿನ ಮೂಲಕ ಪಾರಾಗಲು ಯತ್ನಿಸಿ ಮಣ್ಣುಮುಕ್ಕಿದ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ.

ಈ ಕಿಡ್ನಾಪರ್​ ಉತ್ತರ ಪ್ರದೇಶದ ಲಲಿತ್​ಪುರ ರೈಲ್ವೆ ಸ್ಟೇಶನ್​ನಿಂದ ಬಾಲಕಿಯನ್ನು ಕಿಡ್ನ್ಯಾಪ್​ ಮಾಡಿ, ಭೋಪಾಲ್​ಗೆ ಹೋಗುವ ರೈಲು ಹತ್ತಿದ್ದ. ತನ್ನ ಕೆಲಸ ಯಾರಿಗೂ ಗೊತ್ತಾಗಲಿಲ್ಲ ಎಂದೇ ಭಾವಿಸಿದ್ದ. ಆದರೆ ರೈಲ್ವೆ ಪೊಲೀಸರು ಅಪಹರಣಕಾರನಿಗೆ ಭರ್ಜರಿ ಬಲೆ ಬೀಸಿದ್ದರು. ರೈಲು ಲಲಿತ್​ಪುರದಿಂದ ಹೊರಟು ಭೋಪಾಲ್​ಗೆ ಹೋಗುವ ಮಾರ್ಗ ಮಧ್ಯೆ ಕೆಲವು ಸ್ಟೇಶನ್​​ಗಳಲ್ಲಿ ನಿಲ್ಲಬೇಕಿತ್ತು. ಆದರೆ ರೈಲಿನಲ್ಲಿ ಅಪಹರಣಕಾರ ಇರುವ ಬಗ್ಗೆ ಅರಿತಿದ್ದ ಪೊಲೀಸರು ಎಲ್ಲಿಯೂ ರೈಲು ನಿಲ್ಲಿಸದಂತೆ ಸೂಚನೆ ನೀಡಿದ್ದರು. ಅದರಂತೆ ಟ್ರೇನ್​ ಲಲಿತ್​ಪುರದಿಂದ ಭೋಪಾಲ್​ವರೆಗೆ ನಾನ್​-ಸ್ಟಾಪ್​ ಚಲಿಸಿದೆ. ಮಧ್ಯ ರೈಲು ನಿಲ್ಲಿಸಿದರೆ ಎಲ್ಲಿ ಅಪಹರಣಕಾರ ಪಾರಾಗಿಬಿಡುತ್ತಾನೋ ಎಂಬ ಕಾರಣಕ್ಕೆ ಪೊಲೀಸರು, ರೈಲ್ವೆ ಇಲಾಖೆ ಜಂಟಿ ಪ್ಲ್ಯಾನ್​ ಮಾಡಿದ್ದರು. ಭೋಪಾಲ್​ನಲ್ಲಿ ಕಿಡ್ನ್ಯಾಪರ್​ ರೈಲಿನಿಂದ ಇಳಿಯುತ್ತಿದ್ದಂತೆ ಅರೆಸ್ಟ್​ ಆಗಿದ್ದಾನೆ.

ಬಾಲಕಿಯ ಅಪ್ಪ-ಅಮ್ಮನ ಕಣ್ಣುತಪ್ಪಿಸಿ ಆಕೆಯನ್ನು ಅಪಹರಿಸಿದ್ದ ಆರೋಪಿ ನಂತರ ರಾಪ್ಟಿಸಾಗರ್ ಎಕ್ಸ್‌ಪ್ರೆಸ್ ರೈಲು ಹತ್ತಿದ್ದ. ಪಾಲಕರು ತಮ್ಮ ಮಗಳು ಕಾಣದೆ ಹೋದಾಗ ತಕ್ಷಣ ಅಲ್ಲಿಯೇ ಇದ್ದ ಪೊಲೀಸರು, ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ರೈಲ್ವೆ ಪೊಲೀಸ್ ಫೋರ್ಸ್ ಅಧಿಕಾರಿಗಳು ಸಿಸಿಟಿವಿ ಪರಿಶೀಲನೆ ಮಾಡಿದಾಗ ಈ ವ್ಯಕ್ತಿ ಮಗುವನ್ನು ಅಪಹರಿಸಿದ್ದು ಗೊತ್ತಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net