ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದ ಮೈಸೂರು-ದರ್ಭಾಂಗ ಎಕ್ಸ್​ಪ್ರೆಸ್​ ಟ್ರೈನ್​! ಹಳಿತಪ್ಪಿದ 13 ಬೋಗಿ, 19 ಮಂದಿಗೆ ಗಾಯ | Train Accindent

Train Accindent
Published on

ಚೆನ್ನೈ: ಸ್ಟೇಷನರಿ ಗೂಡ್ಸ್​ ರೈಲಿಗೆ ಮೈಸೂರು-ದರ್ಭಾಂಗ ಎಕ್ಸ್​ಪ್ರೆಸ್​ ರೈಲು ( Mysuru Darbhanga Express ) ಡಿಕ್ಕಿಯಾದ ( Train Accindent ) ಪರಿಣಾಮ ಸುಮಾರು 19 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ತಮಿಳುನಾಡು ( Tamil Nadu ) ರಾಜಧಾನಿ ಚೆನ್ನೈ ಬಳಿಯ ಕವರೈಪೆಟ್ಟೈ ರೈಲು ನಿಲ್ದಾಣದಲ್ಲಿ ನಡೆದಿದೆ. ಡಿಕ್ಕಿಯ ಪರಿಣಾಮ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 13 ಬೋಗಿಗಳು ಹಳಿ ತಪ್ಪಿವೆ.

ಮೈಸೂರು-ದರ್ಭಾಂಗ ಬಾಗಮತಿ ಎಕ್ಸ್‌ಪ್ರೆಸ್‌ನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ತಮ್ಮ ಪ್ರಯಾಣವನ್ನು ಮುಂದುವರಿಸಲು ಶನಿವಾರ (ಅ.12) ಬೆಳಿಗ್ಗೆ ಮತ್ತೊಂದು ವಿಶೇಷ ರೈಲಿಗೆ ವರ್ಗಾಯಿಸಲಾಯಿತು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ರೈಲ್ವೇ ಅಧಿಕಾರಿಗಳ ಪ್ರಕಾರ, ಕವರೈಪೆಟ್ಟೈ ನಿಲ್ದಾಣಕ್ಕೆ ರೈಲು ಪ್ರವೇಶಿಸುವಾಗ ಸಿಗ್ನಲ್ ಮಾಡಿದರೂ ಮುಖ್ಯ ಮಾರ್ಗದಲ್ಲಿ ಮುಂದುವರಿಯುವ ಬದಲು, ರೈಲು ಲೂಪ್ ಲೈನ್‌ಗೆ ಸ್ಥಳಾಂತರಗೊಂಡು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.

ಕವರೈಪೆಟ್ಟೈ ನಿಲ್ದಾಣದಲ್ಲಿ ಮೈಸೂರು-ದರ್ಭಾಂಗ ಎಕ್ಸ್​ಪ್ರೆಸ್​ಗೆ ನಿಲುಗಡೆ ಇರಲಿಲ್ಲ. ರೈಲು ನಿಲ್ದಾಣದ ಮೂಲಕ ಹಾದು ಹೋಗಬೇಕಿತ್ತು. ಚೆನ್ನೈ ಬಿಡುತ್ತಿದ್ದಂತೆ ರೈಲಿಗೆ ಗ್ರೀನ್​ ಸಿಗ್ನಲ್​ ನೀಡಲಾಯಿತು. ಚಾಲಕ ಕೂಡ ಸಿಗ್ನಲ್​ ಅನ್ನು ಸರಿಯಾಗಿ ಅನುಸರಿಸುತ್ತಿದ್ದರು. ಆದರೆ, ರೈಲು ಮುಖ್ಯ ಮಾರ್ಗವನ್ನು ತೆಗೆದುಕೊಳ್ಳುವ ಬದಲು ಲೂಪ್​ ಲೈನ್​ ತೆಗೆದುಕೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ದಕ್ಷಿಣ ರೈಲ್ವೇ ಜನರಲ್​ ಮ್ಯಾನೇಜರ್​ ಆರ್​.ಎನ್​. ಸಿಂಗ್​ ತಿಳಿಸಿದ್ದಾರೆ.

ಅಪಘಾತದಲ್ಲಿ ರೈಲಿನ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, 13 ಬೋಗಿಗಳು ಹಳಿತಪ್ಪಿವೆ. ಅಪಘಾತ ಸಂಭವಿಸಿದ ಮಾರ್ಗದಲ್ಲಿ ರೈಲು ಸಂಚಾರವನ್ನು ಮುಚ್ಚಲಾಗಿದ್ದು, ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ. ರೈಲ್ವೆಯು ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ ಮತ್ತು ಅರ್ಧ ಡಜನ್‌ಗಿಂತಲೂ ಹೆಚ್ಚು ಇತರ ರೈಲುಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಡೈವರ್ಟ್​ ಮಾಡಲಾಗಿದೆ.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲೆ ನಿಗಾ ಇರಿಸಿದ್ದಾರೆ. ಚೆನ್ನೈನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜಿನಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಭೇಟಿ ಮಾಡಿದರು. ಸಚಿವ ಅವದಿ ನೇಸರ್ ಹಾಗೂ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

ಶೇ. 95 ರಷ್ಟು ಪ್ರಯಾಣಿಕರನ್ನು ಅಪಘಾತಕ್ಕೀಡಾದ ಕೋಚ್‌ಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಅಥವಾ ಗಂಭೀರ ಗಾಯಗಳ ವರದಿಯಾಗಿಲ್ಲ ಎಂದು ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net