

ಬೆಂಗಳೂರು: ಟ್ರಾಫಿಕ್ ಪೊಲೀಸರು ಹಿಡಿಯುತ್ತಿಲ್ಲ ಎಂದು ನಿಯಮ ಉಲ್ಲಂಘಿಸುವವರು ಓದಲೇ ಬೇಕಾದ ಸುದ್ದಿ ಇದು. ಸಿಗ್ನಲ್ ಅಲ್ಲಿ ಯಾರೂ ನೋಡುತ್ತಿಲ್ಲ ಎಂದು ಬೇಕಾಬಿಟ್ಟಿ ವಾಹನ ಚಲಾವಣೆ ಮಾಡಿದರೆ ಕೇಸ್ ದಾಖಲಾಗುವುದು ಮಾತ್ರ ಖಂಡಿತ.
ಇನ್ನು ಮುಂದೆ ಟ್ರಾಫಿಕ್ ಪೊಲೀಸರು ನಿಲ್ಲಸಲಿಲ್ಲ ಎಂದರೆ ಸಿಗ್ನಲ್ ಬಳಿ ಇರುವ ಕ್ಯಾಮರಾ ಮೂಲಕ ಟ್ರ್ಯಾಕ್ ಮಾಡಿ ವಾಹನದ ಮೇಲೆ ಪ್ರಕರಣವನ್ನು ದಾಖಲಿಸಲಾಗುತ್ತದೆ. ಸದ್ಯಕ್ಕೆ ಟ್ರಾಫಿಕ್ ಪೊಲೀಸರು ವಾಹನವನ್ನ ತಡೆದು ತಪಾಸಣೆ ಮಾಡುವುದನ್ನು ನಿಲ್ಲಿಸಿದ್ದಾರೆ.
ಪೊಲೀಸರು ನಿಲ್ಲಿಸುತ್ತಿಲ್ಲ ಎಂದು ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಳವಾಗಿದ್ದು ದಿನಕ್ಕೆ 1 ಲಕ್ಷ 20 ಸಾವಿರ ಕೇಸ್ಗಳು ಆನ್ಲೈನ್ನಲ್ಲಿ ರಿಜಿಸ್ಟರ್ ಆಗಿವೆ. ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿ ಇತರೆ ಕೇಸ್ಗಳು ದಾಖಲಾಗಿವೆ.
ಎರಡು ತಿಂಗಳಲ್ಲಿ 72 ಲಕ್ಷ ಕೇಸ್ ಗಳು ದಾಖಲಾಗಿರೋದು ಪತ್ತೆಯಾಗಿದ್ದು ಯಾರೋಬ್ಬರೂ ದಂಡದ ಮೊತ್ತವನ್ನು ಪಾವತಿ ಮಾಡಿಲ್ಲ ಎನ್ನುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮನೆ ಬಾಗಿಲಿಗೆ ಬರಲು ಸಂಚಾರಿ ಪೊಲೀಸರು ತೀರ್ಮಾನ ಮಾಡಿದ್ದಾರೆ.
ಈಗಾಗಲೇ ನಿಯಮ ಉಲ್ಲಂಘಿಸಿದವರ ಮನೆಗಳಿಗೆ ನೊಟೀಸ್ ಕಳಿಸಿದ್ದು ಜನರು ನೊಟೀಸ್ಗೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಚುನಾವಣೆ ಮುಗಿದ ಬಳಿಕ ಅತಿ ಹೆಚ್ಚು ರೂಲ್ಸ್ ಬ್ರೇಕ್ ಮಾಡಿರುವವರ ಮನೆಗೆ ಹೋಗಿ ದಂಡ ಕಟ್ಟಿಸಿಕೊಳ್ಳಲು ಫ್ಲ್ಯಾನ್ ಮಾಡಲಾಗಿದೆ.