

ಚಿಕ್ಕಮಗಳೂರು: ಸಂಚಾರಿ ಪೊಲೀಸರು ಅಂದರೆ ವಾಹನ ತಪಾಸಣೆ ಮಾಡುವವರು, ಟ್ರಾಫಿಕ್ ಪೊಲೀಸರು ಕಂಡರೆ ಅಲ್ಲಿಂದ ತಪ್ಪಿಸಿಕೊಂಡರೆ ಸಾಕು ಎನ್ನುತ್ತಿದ್ದ ಕಾಫಿನಾಡಿಗರಿಗೆ ಭಾನುವಾರ ಇದೇ ಸಂಚಾರಿ ಪೊಲೀಸರು ಮೆ ಐ ಹೆಲ್ಪ್ ಯೂ ಅನ್ನೋ ಕೈಪಟ್ಟಿಯೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡರು.
ನಗರದಲ್ಲಿ ಇರುವುದು ಕೆಲವೇ ಮುಖ್ಯ ರಸ್ತೆ, ಎರಡ್ಮೂರು ವೃತ್ತಗಳು. ಈ ವೃತ್ತದಲ್ಲಿ ಬೈಕ್, ಕಾರ್ ಸೇರಿದಂತೆ ಪ್ರತಿಯೊಬ್ಬರು ಮೊದಲು ನೋಡುತ್ತಿದುದು ಟ್ರಾಫಿಕ್ ಪೊಲೀಸರಿದ್ದಾರಾ? ಸೀಟ್ ಬೆಲ್ಟ್ , ಹೆಲ್ಮೆಟ್ ಎಲ್ಲ ಸರಿ ಇದ್ದರೂ ಡಾಕ್ಯುಮೆಂಟ್ ಕೇಳುತ್ತಾರಾ ಎಂಬ ಅನುಮಾನದಿಂದಲೇ ಸಾಗುತ್ತಿದ್ದರು. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ವಿಜಯವಾಣಿ ಸಂವಾದ ಸೇರಿ ಹಲವು ಬಾರಿ ಮೊದಲ ಸಮಸ್ಯೆ ಎಂದೇ ಸ್ಥಳೀಯರು ಎಸ್ಪಿ ಸೇರಿದಂತೆ ಅಧಿಕಾರಿಗಳ ಮುಂದಿಡುತ್ತಿದ್ದು ಟ್ರಾಫಿಕ್ ಸಮಸ್ಯೆಯ ಬಗ್ಗೆಯೇ. ಹಾಸನ ಮಾರ್ಗದಿಂದ ಬರುವ ಪ್ರವಾಸಿಗರಿಗೂ ನಾಲ್ಕೈದು ಕಡೆಗಳಲ್ಲಿ ತಪಾಸಣೆ ಮಾಡುತ್ತಾರೆ ಎಂಬ ಆರೋಪ ಹೇಳುತ್ತಿದ್ದರು. ಅದರೆ ಹಿಂದಿನ ಎಸ್ಪಿಯಾಗಿದ್ದ ಉಮಾಪ್ರಶಾಂತ್ ಅವರು ಟ್ರಾಫಿಕ್ ಪಿಎಸ್‌ಐ ಸೇರಿ ಇಬ್ಬರಿಗೆ ಮಾತ್ರ ತಪಾಸಣೆ ನಡೆಸಿ ದಂಡ ವಸೂಲಿಗೆ ಅವಕಾಶ ನೀಡಿದ್ದರು. ಇದನ್ನೇ ಮುಂದುವರಿಸಿರುವ ಈಗಿನ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಮುಂದಾಗಿದ್ಧಾರೆ. ಯಾವ ದಿನ ಎಲ್ಲಿ ನಿಗದಿ ಮಾಡಿರುವ ಸ್ಥಳದಲ್ಲಿಯೇ ಪಾರ್ಕಿಂಗ್ ಮಾಡುವಂತೆ ಸಿಬ್ಬಂದಿ, ಸವಾರರಿಗೆ ಸೂಚನೆ ನೀಡುತ್ತಿದ್ದಾರೆ.
ಭಾನುವಾರ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದು ಅದು ನಾನು ನಿಮ್ಮ ಮಿತ್ರ, ಮೇ ಐ ಹೆಲ್ಪ್ ಯೂ ಅನ್ನೋದನ್ನ ಬಲಗೈನ ಭುಜದ ಸಮೀಪ ಹಾಕಿಕೊಂಡು ನಗರದ ಪ್ರಮುಖ ರಸ್ತೆ ಹಾಗೂ ಹನುಮಂತಪ್ಪ ವೃತ್ತ, ಎನ್‌ಎಂಸಿ ಸರ್ಕಲ್‌ನಲ್ಲಿ ಕಾಣಿಸಿಕೊಂಡರು.
ಶನಿವಾರ ಸಂಚಾರಿ ಠಾಣೆಯಲ್ಲಿ ಎಸ್ಪಿ ನೇತೃತ್ವದಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿ ನಂತರ ಬಲಗೈಗೆ ಬೆಲ್ಟ್ ಗಳನ್ನು ಹಾಕಲಾಯಿತು. ಇನ್ಮುಂದೆ ಈ ಬೆಲ್ಟ್‌ಗಳನ್ನು ಹಾಕಿಕೊಂಡೆ ಕರ್ತವ್ಯ ನಿರ್ವಹಿಸಲಿದ್ದು ಜನಸ್ನೇಹಿ ಟ್ರಾಫಿಕ್ ಪೊಲೀಸರಾಗಿ ಕಾಣುವ ನಿರೀಕ್ಷೆ ಜನರಲ್ಲಿದೆ.