

ಸಾಗರ: ಕಾರ್ಮಿಕರಿಗೆ ಬಳಕೆ ಆಗಬೇಕಿದ್ದ ಸಂಚಾರ ಆರೋಗ್ಯ ಘಟಕ ಯೋಜನೆ ನಿಷ್ಪ್ರಯೋಜಕವಾಗುತ್ತಿದೆ. ಕಾರ್ಮಿಕರಿಗೆ ಮಾಹಿತಿ ನೀಡದೆ ಆರೋಗ್ಯ ಘಟಕವನ್ನು ತಂದು ನಿಲ್ಲಿಸಿ ವಾಪಸ್ ಒಯ್ಯಲಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಸಿದ್ದಪ್ಪ ಆಕ್ಷೇಪ ವ್ಯಕ್ತಪಡಿಸಿದರು.
ಸಾಗರದ ಜೆ.ಪಿ.ನಗರದಲ್ಲಿ ಶುಕ್ರವಾರ ಕಾರ್ಮಿಕರಿಗೆ ಮಾಹಿತಿ ನೀಡದೆ ತಂದು ನಿಲ್ಲಿಸಿ ಸಮಯ ವ್ಯರ್ಥ ಮಾಡುತ್ತಿದ್ದ ಸಂಚಾರ ಆರೋಗ್ಯ ಘಟಕದ ಎದುರು ಪ್ರತಿಭಟನೆ ನಡೆಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರದ ಅತ್ಯಂತ ಮಹತ್ವದ ಯೋಜನೆ ಇದು. ಕಾಮಿಕರು ಇರುವ ಸ್ಥಳಗಳಿಗೆ ತೆರಳಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಸಂಚಾರ ಆರೋಗ್ಯ ಘಟಕವನ್ನು ಆರಂಭಿಸಿದೆ. ಅಸಂಘಟಿತ, ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿ ಎಲ್ಲರಿಗೂ ಸುಲಭವಾಗಿ ಆರೋಗ್ಯ ಭಾಗ್ಯ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಮನೆಬಾಗಿಲಿಗೆ ಹೋಗಿ ತಪಾಸಣೆ ನೀಡಬೇಕಾದ ಸಂಚಾರ ಆರೋಗ್ಯ ಘಟಕವು ಕಾರ್ಮಿಕರು ಇಲ್ಲದ ಕಡೆ, ಕಾರ್ಮಿಕರಿಗೆ ಮಾಹಿತಿಯನ್ನೂ ನೀಡದೆ ವಾಹನ ತಂದು ನಿಲ್ಲಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಚಾರ ಆರೋಗ್ಯ ಘಟಕವನ್ನು ಸರ್ಕಾರದಿಂದ ನಿಭಾಯಿಸಿದ್ದರೆ ಹೆಚ್ಚು ಅರ್ಥಪೂರ್ಣ ಆಗುತ್ತಿತ್ತು. ಯೋಜನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿದ್ದರಿಂದ ಅವರು ಬೇಕಾಬಿಟ್ಟಿ ನಿರ್ವಹಣೆ ಮಾಡುತ್ತಿದ್ದಾರೆ. ಸಂಚಾರಿ ಆರೋಗ್ಯ ಘಟಕದಲ್ಲಿ ವೈದ್ಯರು, ಸಿಬ್ಬಂದಿ, ಔಷಧ ಎಲ್ಲವೂ ಇರುತ್ತದೆ. ಆದರೆ ಮಾಹಿತಿಯೇ ಕೊಡುತ್ತಿಲ್ಲ. ಈ ಕುರಿತು ಶಾಸಕರಿಗೆ ಮಾಹಿತಿ ನೀಡಲಾಗುವುದು. ಅಲ್ಲದೆ ಕಾರ್ಮಿಕ ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಮಹ್ಮದ್ ಇಲಿಯಾಸ್, ನಾಗರಾಜ್, ಚೌಡಪ್ಪ, ಸೋಮಶೇಖರ್, ದೇವರಾಜ್, ಶ್ರೀನಿವಾಸ್ ಶೆಟ್ಟಿ ಇತರರಿದ್ದರು.