

ಸೋಮವಾರಪೇಟೆ : ರಂಗಭೂಮಿ ಅತ್ಯಂತ ಪ್ರಭಾವಶಾಲಿಯಾಗಿದೆ, ಆದರೂ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿವೆ ಎಂದು ಹಿರಿಯ ಪತ್ರಕರ್ತ ಎಸ್.ಮಹೇಶ್ ಹೇಳಿದರು.
ಇಲ್ಲಿನ ನಾರಾಯಣಗುರು ಸೇವಾ ಸಮಿತಿಯಿಂದ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಗೆಜ್ಜೆಗಿರಿ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಭಾವಶಾಲಿಯಾಗಿರುವ ರಂಗಭೂಮಿಯಿಂದ ಬಂದಂತಹ ಹಲವು ಹಿರಿಯ ಕಲಾವಿದರು ಚಿತ್ರರಂಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂದು ಆಧುನಿಕತೆ ಬೆಳೆದಂತೆ ನಾಟಕ, ಯಕ್ಷಗಾನ ಮುಂತಾದ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದರು.
ಸೋಮವಾರಪೇಟೆಯಲ್ಲಿ ಹಲವು ವರ್ಷಗಳ ನಂತರ ಯಕ್ಷಗಾನ ಪ್ರದರ್ಶನ ಏರ್ಪಡಿಸಿರುವುದು ಕಲಾಪ್ರೇಮಿಗಳಿಗೆ ಸಂತಸ ತಂದಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಮಾತನಾಡಿ, ಕಲೆಗಳು ಸಂಸ್ಕೃತಿಯ ಪ್ರತೀಕವಾಗಿದೆ, ನಮ್ಮ ಭಾಷೆಯ ಉಳಿವು ಇಂತಹ ಕಲಾಪ್ರದರ್ಶನದಿಂದ ಸಾಧ್ಯವೆಂದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಾಯೋಜಕ ಪದ್ಮನಾಭ ಹಾಗೂ ಅವರ ತಾಯಿಯನ್ನು ಲಲಿತಾ ಅವರನ್ನು ಸನ್ಮಾನಿಸಲಾಯಿತು. ನಾರಾಯಣಗುರು ಸೇವಾಸಮಿತಿ ಅಧ್ಯಕ್ಷ ಚಂದ್ರಹಾಸ ಅಧ್ಯಕ್ಷತೆ ವಹಿಸಿದ್ದರು, ಗೆಜ್ಜೆಗೀರಿ ಯಕ್ಷಗಾನ ವ್ಯವಸ್ಥಾಪಕ ದೀಪಕ್, ಬಂಟರ ಸಂಘದ ಅಧ್ಯಕ್ಷ ಜನಾರ್ದನ, ಜಾನಪದ ಪರಿಷತ್ತು ಅಧ್ಯಕ್ಷ ಕೆ.ಎ. ಪ್ರಕಾಶ್, ಪ್ರಮುಖರಾದ ಮಂಜುನಾಥ್ ಚೌಟ, ವಿಶ್ವರೂಪಚಾರ್ ನಾರಾಯಣಗುರು ಸೇವಾ ಸಮಿತಿಯ ಗೌರವ ಸಲಹೆಗಾರ ಬಿ.ಎ.ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಇಂದಿರಾ ಮೋನಪ್ಪ ಇದ್ದರು.