12ಕ್ಕೂ ಹೆಚ್ಚು ದೇಶಗಳ ಜತೆ ವ್ಯಾಪಾರ ಮಾತುಕತೆ

Untitled design (5)
Published on

ನವದೆಹಲಿ: ಸೌದಿ ಅರೇಬಿಯಾ, ಕತಾರ್, ಇಸ್ರೇಲ್, ಒಮನ್, ಯುರೋಪಿಯನ್ ಯೂನಿಯನ್, ಸ್ವಿಜರ್ಲೆಂಡ್, ರಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳ ಕುರಿತು ಭಾರತ ಚರ್ಚೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ದೇಶಗಳಲ್ಲದೆ ತಾಜಿಕಿಸ್ತಾನ್, ಕಾಂಬೋಡಿಯಾ, ಉರುಗ್ವೆ, ಮಾಲ್ಡೀವ್ಸ್, ಕುವೈತ್​ನೊಂದಿಗೂ ಚರ್ಚೆ ನಡೆಯುತ್ತಿದೆ. ಮುಂದಿನ 3ರಿಂದ 6 ತಿಂಗಳುಗಳಲ್ಲಿ ಕೆಲವು ದೇಶಗಳೊಂದಿಗಿನ ಒಪ್ಪಂದಗಳನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮತ್ತು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಹೂಡಿಕೆದಾರರನ್ನು ಆಕರ್ಷಿಸುವುದಕ್ಕಾಗಿ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ಬಜೆಟ್​ನಲ್ಲಿ ಸರ್ಕಾರ ಪ್ರಸ್ತುತ ದ್ವಿಪಕ್ಷೀಯ ವ್ಯಾಪಾರ ಮಾದರಿಯನ್ನು ಹೆಚ್ಚು ಹೂಡಿಕೆದಾರ-ಸ್ನೇಹಿಯಾಗಿ ಮಾಡಲು ಮತ್ತು ವಿದೇಶಿ ಕಂಪನಿಗಳನ್ನು ಆಕರ್ಷಿಸಲು ಅನುವಾಗುವಂತೆ ಪರಿಷ್ಕರಿಸುವುದಾಗಿ ಘೊಷಿಸಿತ್ತು. 2024ರಲ್ಲಿ 2 ದೇಶಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ವಿವರಿಸಿದ್ದಾರೆ. ಏಪ್ರಿಲ್ 2000ದಿಂದ ಮಾರ್ಚ್ 2025ರವರೆಗಿನ ಅವಧಿಯಲ್ಲಿ ಭಾರತಕ್ಕೆ ಒಟ್ಟು 1 ಟ್ರಿಲಿಯನ್ ಡಾಲರ್​ಗಿಂತಲೂ ಹೆಚ್ಚಿನ ವಿದೇಶಿ ನೇರ ಬಂಡವಾಳ (ಎಫ್​ಡಿಐ) ಹರಿದುಬಂದಿದೆ. ಇದು ದೇಶವನ್ನು ಜಾಗತಿಕವಾಗಿ ಸುರಕ್ಷಿತ ಮತ್ತು ಪ್ರಮುಖ ಹೂಡಿಕೆ ತಾಣವಾಗಿಸಿದೆ. ಕಳೆದ ವಿತ್ತೀಯ ವರ್ಷದಲ್ಲಿ, ಇದು 81 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net