

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಮವಾರ ಕುಸಿದು ಬಿದ್ದು ಅಸ್ವಸ್ಥರಾದ ವೃದ್ಧೆಯೊಬ್ಬರನ್ನು ಪ್ರವಾಸಿ ಮಿತ್ರ ಸಿಬ್ಬಂದಿ ಶ್ರೀಕಂಠಸ್ವಾಮಿ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ಗ್ರಾಮದ ಹೊನ್ನಮ್ಮ ಎಂಬುವರು ಮಲೆ ಮಹದೇಶ್ವರ ಬೆಟ್ಟಕ್ಕೆ ಸೋಮವಾರ ಆಗಮಿಸಿ ಅಂತರಗಂಗೆಗೆ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಅಸ್ವಸ್ಥಗೊಂಡರು. ಈ ಬಗ್ಗೆ ತಿಳಿದ ಕರ್ತವ್ಯದಲ್ಲಿದ್ದ ಪ್ರವಾಸಿ ಮಿತ್ರ ಸಿಬ್ಬಂದಿ ಶ್ರೀಕಂಠಸ್ವಾಮಿ ಅವರು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಬ್ಯಾಟರಿ ವಾಹನದ ಚಾಲಕರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಬ್ಯಾಟರಿ ವಾಹನಕ್ಕೆ ಶ್ರೀಕಂಠಸ್ವಾಮಿ ಅವರು ವೃದ್ದೆಯನ್ನು ಹೊತ್ತು ತಂದು ವಾಹನದಲ್ಲಿ ಕೂರಿಸಿದ್ದಾರೆ. ಬ್ಯಾಟರಿ ವಾಹನದಲ್ಲಿ ತೆರಳಿದ ಶ್ರೀಕಂಠಸ್ವಾಮಿ ವೃದ್ಧೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೋಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಕೆಲ ಹೊತ್ತಿನ ಬಳಿಕ ವೃದ್ಧೆ ಚೇತರಿಸಿಕೊಂಡಿದ್ದಾರೆ. ಈ ಕಾರ್ಯಕ್ಕೆ ಭಕ್ತರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.